ADVERTISEMENT

₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ: ಎಡಿಜಿಪಿ ಅಲೋಕ್ ವಿಚಾರಣೆ

‘ಬಿ’ ವರದಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 22:15 IST
Last Updated 21 ಡಿಸೆಂಬರ್ 2022, 22:15 IST
ಅಲೋಕ್‌ ಕುಮಾರ್
ಅಲೋಕ್‌ ಕುಮಾರ್   

ಬೆಂಗಳೂರು: ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ವರದಿಯನ್ನು ತಿರಸ್ಕರಿ ಸಿರುವಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾ ಲಯ, ನೇರ ವಿಚಾರಣೆ ಆರಂಭಿಸಲು ನಿರ್ಧರಿಸಿದೆ.

2015ರಲ್ಲಿ ವ್ಯಕ್ತಿಯೊಬ್ಬರಿಂದ₹ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಅಲೋಕ್‌ ಕುಮಾರ್, ಶೇಷಾದ್ರಿಪುರ ಉಪ ವಿಭಾಗದ ಆಗಿನ ಎಸಿಪಿ ದಾನೇಶ್ವರ್‌ ರಾವ್‌ ಮತ್ತು ವೈಯಾಲಿಕಾವಲ್‌ ಪೊಲೀಸ್‌ ಠಾಣೆಯ ಆಗಿನ ಇನ್‌ಸ್ಪೆಕ್ಟರ್‌ ಶಂಕರಾಚಾರಿ ವಿರುದ್ಧ ಸಲ್ಲಿಕೆಯಾಗಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ‘ಬಿ’ ವರದಿ ಸಲ್ಲಿಸಿದ್ದರು.

ನ್ಯಾಯಾಲಯದ ಆದೇಶದಲ್ಲೇನಿದೆ?

‘ಸಾಕ್ಷಿಯಾಗಿದ್ದ ಪುಟ್ಟೇಗೌಡ ಅವರ ಹೇಳಿಕೆಯನ್ನು ತನಿಖಾಧಿಕಾರಿ ನಂಬಿಲ್ಲ. ಸಾಕ್ಷಿಯ ಹೇಳಿಕೆಯ ಕುರಿತು ಅಭಿಪ್ರಾಯ ನೀಡಬೇಕಿರುವುದು ನ್ಯಾಯಾಲಯವೇ ಹೊರತು ತನಿಖಾಧಿಕಾರಿಯಲ್ಲ. ಪುಟ್ಟೇಗೌಡರ ಹೇಳಿಕೆಯನ್ನು ಪುಷ್ಟೀಕರಿಸುವಂತಹ ಸಾಕ್ಷ್ಯಗಳು ಲಭಿಸಿಲ್ಲ ಎಂಬ ತನಿಖಾಧಿಕಾರಿಯ ತೀರ್ಮಾನವು ಸಮರ್ಥನೀಯವಲ್ಲ. ನೇರವಾದ ಸಾಕ್ಷ್ಯಗಳು ಲಭ್ಯವಿರುವಾಗ ಆರೋಪ ಪುಷ್ಟೀಕರಿಸುವಂತಹ ಇತರ ಸಾಕ್ಷ್ಯ ಗಳ ಅಗತ್ಯವಿಲ್ಲ. ತನಿಖಾ ಧಿಕಾರಿಯು ಲಭ್ಯ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದಿಡುವ ಬದಲಿಗೆ ಆರೋಪಿ ಗಳನ್ನು ರಕ್ಷಿಸುವ ಪ್ರಯತ್ನ ಮಾಡಿ ದ್ದಾರೆ’ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ADVERTISEMENT

‘ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಪಡೆದಿರುವ ಕುರಿತು ವಿಚಾರಣೆಯ ಅಗತ್ಯವಿದೆ. ಅಂತಿಮ ವರದಿಯು ಸಮಗ್ರ ಹಾಗೂ ಪಾರದರ್ಶಕವಾಗಿಲ್ಲ. ತನಿಖೆಯೂ ಸಂಪೂರ್ಣವಾಗಿಲ್ಲ. ಆರೋಪಿಗಳ ವಿರುದ್ಧ ವಿಚಾರಣೆ ಆರಂಭಿಸಿ, ಸಮನ್ಸ್‌ ಜಾರಿಗೊಳಿಸಲು ಪೂರಕವಾದ ಹಲವು ಸಾಕ್ಷ್ಯಗಳು ತನಿಖಾಧಿಕಾರಿ ಸಲ್ಲಿಸಿರುವ ‘ಬಿ’ ವರದಿಯೊಳಗೇ ಇವೆ. ಪ್ರಕರಣವನ್ನು ಮುಕ್ತಾಯಗೊಳಿಸಲು ತನಿಖಾಧಿಕಾರಿ ಕೈಗೊಂಡಿರುವ ತೀರ್ಮಾನ ಸಮರ್ಪಕವಾಗಿಲ್ಲ’ ಎಂದು ನ್ಯಾಯಾಧೀಶರು ‘ಬಿ’ ವರದಿಯನ್ನು ತಿರಸ್ಕರಿಸುವ ತೀರ್ಮಾನದಲ್ಲಿ ಹೇಳಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಮುಖಾರಾಂ ಸಲ್ಲಿಸಿರುವ ಬಿ ವರದಿಯು ದುರುದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಅಲೋಕ್‌ ಕುಮಾರ್‌, ದಾನೇಶ್ವರ್‌ ರಾವ್‌, ಶಂಕರಾಚಾರಿ ಹಾಗೂ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯ ಆಗಿನ ಕಾನ್‌ಸ್ಟೆಬಲ್‌ ಚಂದ್ರು ಅಲಿಯಾಸ್‌ ಚಂದ್ರಶೇಖರ್‌ ವಿರುದ್ಧ ವಿಚಾರಣೆ ನಡೆಯಲಿದ್ದು, 2023ರ ಜನವರಿ 31ರಂದು ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಲು ಸಮಯ ನಿಗದಿಮಾಡಿದೆ.

2014ರಲ್ಲಿ ವೈಯಾಲಿಕಾವಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಆರೇಂಜ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಲ್ಲಿನ ಪೊಲೀಸ್‌ ಕಾನ್‌ಸ್ಟೇಬಲ್‌ ಚಂದ್ರು ಅಲಿಯಾಸ್‌ ಚಂದ್ರಶೇಖರ್‌ ₹5 ಲಕ್ಷ ಲಂಚ ಪಡೆದಿದ್ದು, ಆಗ ಬೆಂಗಳೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿನಷರ್‌ ಹುದ್ದೆಯಲ್ಲಿದ್ದ ಅಲೋಕ್‌ ಕುಮಾರ್‌ ಅವರು ದಾನೇಶ್ವರ್‌ ರಾವ್‌ ಹಾಗೂ ಶಂಕರಾಚಾರಿ ಮೂಲಕ ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಲ್ಲಿಕಾರ್ಜುನ ಎಂ.ಬಿ. 2015ರ ಮೇ 30ರಂದು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಶಂಕರಾಚಾರಿ ಮತ್ತು ದಾನೇಶ್ವರ್‌ ರಾವ್‌ ಅವರಿಗಾಗಿ ಚಂದ್ರಶೇಖರ್‌ ಮೂಲಕ 2014ರ ಸೆಪ್ಟೆಂಬರ್‌ 1ರಂದು ₹ 5 ಲಕ್ಷ ಲಂಚ ನೀಡಲಾಗಿತ್ತು. ಮರು ದಿನವೇ ದಾನೇಶ್ವರ್‌ ರಾವ್‌ ತಮ್ಮನ್ನು ಸಂಪರ್ಕಿಸಿ ಅಲೋಕ್‌ ಕುಮಾರ್‌ ಅವರಿಗೆ ₹1 ಕೋಟಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. 48 ಗಂಟೆಗಳೊಳಗೆ ಹಣ ಹೊಂದಿಸುವಂತೆ ಒತ್ತಡ ಹೇರಿದ್ದರು. ಲಂಚ ನೀಡದಿದ್ದರೆ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ತೀವ್ರ ಸ್ವರೂಪದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆರೋಪಿ ಕಾನ್‌ಸ್ಟೆಬಲ್‌ ಜತೆಗಿನ ಮಾತುಕತೆಯ ಆಡಿಯೊ ರೆಕಾರ್ಡಿಂಗ್‌ ತುಣುಕುಗಳಿದ್ದ ಮೂರು ಸಿ.ಡಿ ಗಳನ್ನೂ ದೂರುದಾರರು ತನಿಖಾ ಸಂಸ್ಥೆಗೆ ಸಲ್ಲಿಸಿದ್ದರು.

ತಮ್ಮ ಸಂಬಂಧಿ ಪುಟ್ಟೇಗೌಡ ಎಂಬುವವರು ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿದ್ದರು. ತನ್ನಿಂದ ₹1 ಕೋಟಿ ಲಂಚ ಪಡೆಯಲು ಒತ್ತಡ ಸೃಷ್ಟಿಸುವುದಕ್ಕಾಗಿ ಪುಟ್ಟೇಗೌಡ ಅವರನ್ನು ಅಮಾನತು ಮಾಡಲಾಗಿತ್ತು ಎಂದು ಮಲ್ಲಿಕಾರ್ಜುನ್‌ ದೂರಿನಲ್ಲಿ ಆರೋಪಿಸಿದ್ದರು. ಪುಟ್ಟೇಗೌಡ ಕೂಡ ಲೋಕಾಯುಕ್ತ ಪೊಲೀಸರ ಎದುರು ಹಾಜರಾಗಿ ಹೇಳಿಕೆ ದಾಖಲಿಸಿದ್ದರು.

ಪ್ರಾಥಮಿಕ ತನಿಖೆ ಬಳಿಕ ಕಾನ್‌ಸ್ಟೆಬಲ್‌ ಚಂದ್ರಶೇಖರ್‌ ವಿರುದ್ಧ ಮಾತ್ರ ಎಫ್‌ಐಆರ್‌ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಏಳು ವರ್ಷಗಳ ಬಳಿಕ 2022ರ ಮಾರ್ಚ್‌ 19ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದ ತನಿಖಾಧಿಕಾರಿ, ‘ದೂರುದಾರರು ದಾನೇಶ್ವರ್‌ ರಾವ್‌ ಮತ್ತು ಶಂಕರಾಚಾರಿ ಅವರಿಗೆ 5 ಲಕ್ಷ ಲಂಚ ನೀಡಿರುವುದನ್ನು ಪುಷ್ಟೀಕರಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ. ಅಂತಹ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ದೂರುದಾರರು ವಿಫಲವಾಗಿದ್ದಾರೆ’ ಎಂದು ತಿಳಿಸಿದ್ದರು. ಸಬ್‌ ಇನ್‌ಸ್ಪೆಕ್ಟರ್‌ ಪುಟ್ಟೇಗೌಡ ನೀಡಿದ್ದ ಹೇಳಿಕೆಯನ್ನೂ ತನಿಖಾಧಿಕಾರಿ ಅಲ್ಲಗಳೆದಿದ್ದರು.

ತನಿಖಾಧಿಕಾರಿ ಸಲ್ಲಿಸಿದ್ದ ಬಿ ವರದಿಯನ್ನು ಪ್ರಶ್ನಿಸಿದ್ದ ದೂರುದಾರರು, ನ್ಯಾಯಾಲಯಕ್ಕೆ ಪ್ರತಿಭಟನಾ ಮೆಮೊ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ಲಕ್ಷ್ಮೀನಾರಾಯಣ ಭಟ್‌, ಬಿ ವರದಿಯನ್ನು ತಿರಸ್ಕರಿಸಿ ಡಿಸೆಂಬರ್‌ 13ರಂದು ಆದೇಶ ಹೊರಡಿಸಿದ್ದಾರೆ.

ಸಂಜ್ಞೇಯ ಅಪರಾಧ ಪ್ರಕರಣ

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್‌ 200ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಸಂಜ್ಞೇಯ ಅಪರಾಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲು ನ್ಯಾಯಾಲಯ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.