ADVERTISEMENT

ಬಿಎಸ್‌ವೈ, ಡಿಕೆಶಿ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್‌ ವಿಚಾರಣೆಗೆ ಸುಪ್ರೀಂ ಅಸ್ತು

ಬಿಎಸ್‌ವೈ, ಡಿಕೆಶಿ ವಿರುದ್ಧದ ಅಪರಾಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:30 IST
Last Updated 13 ಡಿಸೆಂಬರ್ 2019, 20:30 IST
   

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿ ಸೂಚಿಸಿದೆ.

‘ಕಳೆದ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯನ್ನು ಇದುವರೆಗೆ ಕೈಗೆತ್ತಿಕೊಳ್ಳದಿರುವುದು ಆಶ್ಚರ್ಯ ಮೂಡಿಸಿದೆ’ ಎಂಬ ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬಡೆ ನೇತೃತ್ವದ ಪೀಠವು, ಮುಂದಿನ ಜನವರಿ 7ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.ಬೆಂಗಳೂರಿನ ಕೆ.ಆರ್. ಪುರ ಹೋಬಳಿಯ ಬೆನ್ನಿಗಾನಹಳ್ಳಿ ಬಳಿಯ ಭೂಮಿಯ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರೂ ಮುಖಂಡರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಅನ್ನು ರಾಜ್ಯ ಹೈಕೋರ್ಟ್ 2015ರಲ್ಲಿ ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ರಾಮನಗರದ ಸಾಮಾಜಿಕ ಕಾರ್ಯಕರ್ತ ಕಬ್ಬಾಳೆಗೌಡ ಸಲ್ಲಿಸಿದ್ದ ಅರ್ಜಿಯನ್ನು ಹಿಂದೆ ಪಡೆದಿದ್ದರಿಂದ ಕಳೆದ ಫೆಬ್ರುವರಿ 21ರಂದು ಸುಪ್ರೀಂಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿತ್ತು. ಇದಕ್ಕೂ ಮೊದಲು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಹ ತಮ್ಮ ಅರ್ಜಿ ಹಿಂದೆ ಪಡೆದಿದ್ದರು.

‘ಈ ಅಪರಾಧ ಪ್ರಕರಣದ ವಿಚಾರಣೆ ಪುನರಾರಂಭಿಸಬೇಕು’ ಎಂದು ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌. ಹಿರೇಮಠ ಮಧ್ಯ ಪ್ರವೇಶ ಅರ್ಜಿ ಸಲ್ಲಿಸಿದ್ದರು.

ADVERTISEMENT

ಕರ್ನಾಟಕ ಮೂಲದ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರು ಕಳೆದ ಜುಲೈನಲ್ಲಿ ಮಧ್ಯ ಪ್ರವೇಶ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು. ನಂತರ, ಹೊಸದಾಗಿ ಮೇಲ್ಮನವಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಅರ್ಜಿದಾರರಿಗೆ ಸೂಚಿಸಿದ್ದರಿಂದ ಮೇಲ್ಮನವಿ ಸಲ್ಲಿಸಲಾಗಿದೆ.

ಪ್ರಕರಣದವಿವರ: ಬಿ.ಕೆ. ಶ್ರೀನಿವಾಸನ್‌ ಎಂಬುವವರು ಬೆನ್ನಿಗಾನಹಳ್ಳಿ ಬಳಿ 1962ರಲ್ಲಿ ಖರೀದಿಸಿದ್ದ 5.11 ಎಕರೆ ಭೂಮಿಯ ಪೈಕಿ 4.20 ಎಕರೆ ಕೃಷಿ ಜಮೀನನ್ನು ಕೈಗಾರಿಕೆ ಉದ್ದೇಶಕ್ಕೆ ಪರಿವರ್ತಿಸಲಾಗಿತ್ತು. ನಂತರ ಇದೇ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಯ್ದೆ ಅಡಿ ಸ್ವಾಧೀನಪಡಿಸಿಕೊಳ್ಳಲು ನೋಟಿಫೈ ಮಾಡಲಾಗಿತ್ತು.

ಆದರೆ, 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ನೋಟಿಫೈ ಮಾಡಿರುವ ವಿಷಯ ಗೊತ್ತಿದ್ದೂ ಶ್ರೀನಿವಾಸನ್‌ ಅವರಿಂದ ಈ ಭೂಮಿಯನ್ನು ₹ 1.62 ಕೋಟಿ ನೀಡಿ ಖರೀದಿಸಿದ್ದರು. 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ₹ 29 ಕೋಟಿ ಮೌಲ್ಯದ ಭೂಮಿಯನ್ನು ವಸತಿ ಸಮುಚ್ಛಯ ನಿರ್ಮಿಸುವ ಉದ್ದೇಶಕ್ಕೆ ಡಿನೋಟಿಫೈ ಮಾಡಿದ್ದರು.

ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಲಾಗಿದೆ ಎಂಬ ಮಹಾ ಲೇಖಪಾಲ (ಸಿಎಜಿ)ರ ವರದಿಯನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ, 2015ರ ಡಿಸೆಂಬರ್‌ 18ರಂದು ರಾಜ್ಯ ಹೈಕೋರ್ಟ್‌ ಎಫ್‌ಐಆರ್‌ ರದ್ದುಪಡಿಸಿ, ಈ ಇಬ್ಬರೂ ಮುಖಂಡರ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.