ಬೆಂಗಳೂರು: ಅನುದಾನದ ಕೊರತೆ ಯಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಧನಸಹಾಯ’ ಯೋಜನೆ ಯಡಿ 2024–25ನೇ ಸಾಲಿಗೆ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗಿಸಿಲ್ಲ. ಇದರಿಂದಾಗಿ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಂಸ್ಕೃತಿಕ ವಾತಾವರಣ ರೂಪಿಸಲು ಶ್ರಮಿಸುತ್ತಿರುವ ಸಂಘ–ಸಂಸ್ಥೆಗಳಲ್ಲಿ ಹೆಚ್ಚಿನವು ಇಲಾಖೆಯ ಧನಸಹಾಯವನ್ನೇ ನಂಬಿಕೊಂಡು, ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. 2024–25ನೇ ಆರ್ಥಿಕ ವರ್ಷದ ಧನಸಹಾಯ ಪ್ರಕ್ರಿಯೆಯನ್ನು ಇಲಾಖೆ ನಡೆಸದ ಕಾರಣ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಪ್ರಮುಖರು ಕನ್ನಡ ಭವನಕ್ಕೆ ಅಲೆದಾಟ ನಡೆಸಲಾರಂಭಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಮಾತ್ರ ಇರುವುದರಿಂದ ಈ ಸಾಲಿನ ಧನಸಹಾಯ ಮರೀಚಿಕೆಯಾಗಿದೆ.
ಅನುದಾನದ ಕೊರತೆಯಿಂದ ಇಲಾಖೆಯೂ ಈ ಸಾಲಿಗೆ ಧನಸಹಾಯ ನೀಡದಿರಲು ನಿರ್ಧರಿಸಿದೆ. ಇದರಿಂದಾಗಿ ಯೋಜನೆ ಮುಂದುವರಿಯುವ ಬಗ್ಗೆ ಸಾಂಸ್ಕೃತಿಕ ವಲಯದಲ್ಲಿ ಗೊಂದಲ ಉಂಟಾಗಿದೆ.
ರಾಜ್ಯದಲ್ಲಿ ಏಳು ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿವೆ. ಅರ್ಜಿ ಅಲ್ಲಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳಲ್ಲಿ ಒಂದು ಸಾವಿರದಿಂದ 1,500 ಸಂಘ–ಸಂಸ್ಥೆಗಳಿಗೆ ವಾರ್ಷಿಕ ಧನಸಹಾಯ ಒದಗಿಸಲಾಗುತ್ತಿದೆ. ಈ ಹಿಂದೆ ಧನಸಹಾಯಕ್ಕೆ ಸರ್ಕಾರವು ವಾರ್ಷಿಕ ₹15 ಕೋಟಿಯಿಂದ ₹20 ಕೋಟಿ ಅನುದಾನ ಒದಗಿಸುತ್ತಿತ್ತು. 2024–25ನೇ ಸಾಲಿನ ಧನಸಹಾಯಕ್ಕೆ ಇಲಾಖೆ ಬಳಿ ಅನುದಾನ ಇಲ್ಲದೆ, ಹೆಚ್ಚುವರಿ ಅನುದಾನಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡದಿದ್ದರಿಂದ ಇಲಾಖೆಯೂ ಈ ಸಾಲಿನ ಧನಸಹಾಯ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ.
ಹತಾಶರಾದ ಕಲಾವಿದರು: ಅನುದಾನದ ಕೊರತೆಯಿಂದ ಇಲಾಖೆಯು 2023–24ನೇ ಸಾಲಿನ ಧನ ಸಹಾಯವನ್ನು ಕಂತು ರೂಪದಲ್ಲಿ ನೀಡಿತ್ತು. 2024–25ನೇ ಸಾಲಿನ ಧನಸಹಾಯವನ್ನು ಈ ಹಿಂದಿನಂತೆ ನೀಡಲಾಗುತ್ತದೆ ಎಂಬ ಭರವಸೆಯಲ್ಲಿ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸಿವೆ. ಧನಸಹಾಯ ಯೋಜನೆ ಮಾರ್ಗಸೂಚಿ ಪ್ರಕಾರ, ಪ್ರತಿ ವರ್ಷ ಜೂನ್ ತಿಂಗಳಲ್ಲೇ ಅರ್ಜಿ ಆಹ್ವಾನಿಸಿ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಜಿಲ್ಲಾ ಹಂತದಲ್ಲಿ ಪರಿಶೀಲಿಸಬೇಕು. ಆದರೆ, ಈ ಪ್ರಕ್ರಿಯೆ ನಡೆಯದಿದ್ದರಿಂದ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು ಹತಾಶರಾಗಿದ್ದಾರೆ. ಇಲಾಖೆಯ ನಡೆಯಿಂದ ಬೇಸತ್ತು ಹೋರಾಟ ನಡೆಸಲು ಮುಂದಾಗಿದ್ದಾರೆ.
‘ಧನಸಹಾಯವನ್ನೇ ನಂಬಿಕೊಂಡು, ಸ್ವಂತ ಹಣದಲ್ಲಿ ಕಾರ್ಯಕ್ರಮ ಮಾಡಿದ ಸಂಘ–ಸಂಸ್ಥೆಗಳು ಇಲಾಖೆಯ ನಡೆ ಯಿಂದ ಸಂಕಷ್ಟಕ್ಕೆ ಸಿಲುಕಿವೆ. ಕಲೆ ಹಾಗೂ ಕಲಾವಿದರನ್ನು ಕಡೆಗಣಿಸಲಾಗು ತ್ತಿದೆ. ಉತ್ಸವಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಇಲಾಖೆಗೆ, ಧನಸಹಾಯಕ್ಕೆ ಅನುದಾನ ಇರದಿ ರುವುದು ವಿಪರ್ಯಾಸ. ವಿವಿಧ ಅಕಾ ಡೆಮಿಗಳಲ್ಲಿ ಇರುವ ಅನುದಾನವನ್ನು ಹೊಂದಾಣಿಕೆ ಮಾಡಿ, ಧನಸಹಾಯ ನೀಡಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಲಾಗುವುದು’ ಎಂದು ಕಲಾವಿದ ಜಯಸಿಂಹ ಎಸ್. ಹೇಳಿದರು.
2024–25ನೇ ಸಾಲಿನ ಧನಸಹಾಯ ನೀಡುತ್ತಿಲ್ಲ. ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕಿದೆ. ಬಾಕಿ ಇದ್ದ ಕಳೆದ ಸಾಲಿನ ಧನಸಹಾಯವನ್ನು ಈ ವರ್ಷ ಪೂರ್ಣ ಪ್ರಮಾಣದಲ್ಲಿ ನೀಡಿದ್ದೇವೆ.–ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.