ADVERTISEMENT

ಎಷ್ಟೇ ವಿರೋಧ ವ್ಯಕ್ತವಾದರೂ ಹಿಂದಿ ಬಗೆಗಿನ ನನ್ನ ನಿಲುವಿಗೆ ಬದ್ಧ: ದೊಡ್ಡರಂಗೇಗೌಡ

‘ಪ್ರಜಾವಾಣಿ’ ಸಂವಾದದಲ್ಲಿ ಭಾವುಕರಾದ ದೊಡ್ಡರಂಗೇಗೌಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 20:52 IST
Last Updated 25 ಜನವರಿ 2021, 20:52 IST
‘ಪ್ರಜಾವಾಣಿ’ ಫೇಸ್‌ಬುಕ್ ಸಂವಾದದಲ್ಲಿ ಮಾತನಾಡಿದ ದೊಡ್ಡರಂಗೇಗೌಡ -ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಫೇಸ್‌ಬುಕ್ ಸಂವಾದದಲ್ಲಿ ಮಾತನಾಡಿದ ದೊಡ್ಡರಂಗೇಗೌಡ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಈ ಭಾರತದಲ್ಲಿ ಸಂವಿಧಾನ ಒಪ್ಪುವ 23 ಭಾಷೆಗಳೂ ಸರಿಸಮಾನ. ಎಲ್ಲ ಭಾಷೆಯಂತೆ ಹಿಂದಿ ಕೂಡ ಒಂದು ಭಾಷೆ. 250 ವರ್ಷಗಳ ಗುಲಾಮಗಿರಿಯ ಸಂಕೇತವಾಗಿರುವ ಇಂಗ್ಲಿಷನ್ನು ಒಪ್ಪುತ್ತೀರಾದರೇ, ದೇಸಿ ಭಾಷೆಯ ಬಗ್ಗೆ ವಿರೋಧ ಏಕೆ ಎಂಬುದು ನನಗೆ ಅರ್ಥವಾಗದ ಸಂಗತಿ. ಎಷ್ಟೇ ವಿರೋಧ ವ್ಯಕ್ತವಾದರೂಸಮ್ಮೇಳನದ ಅಧ್ಯಕ್ಷ ಭಾಷಣದಲ್ಲೂ ಇದೇ ನಿಲುವು ಇರುತ್ತದೆ’.

‘ಪ್ರಜಾವಾಣಿ’ಯು ಸೋಮವಾರ ಏರ್ಪಡಿಸಿದ ಫೇಸ್‌ಬುಕ್‌ ಸಂವಾದದಲ್ಲಿ 86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಹಂಚಿಕೊಂಡ ಮುಕ್ತ ಮಾತುಗಳಿವು.

‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಕೆಲವರು ಹಳದಿ ಕನ್ನಡಕವನ್ನು ಹಾಕಿಕೊಂಡು ಟೀಕೆ ಮಾಡುತ್ತಾರೆ. ಟೀಕೆಗೆ ಒಳಗಾಗದ ಬದುಕು ಬದುಕೇ ಅಲ್ಲ. ನನಗೆ ಕನ್ನಡಕ್ಕಾಗಿ ದುಡಿಯುವ, ಸೇವೆ ಮಾಡುವ ನಿಜವಾದ ಇಂಗಿತವಿದೆ. ಕೊನೆಯ ಉಸಿರಿರುವವರೆಗೂ ಕನ್ನಡ ಸೇವೆ ಮಾಡುತ್ತೇನೆ. ನಾನು 600 ಚಿತ್ರಗೀತೆಗಳನ್ನು ಬರೆದಿದ್ದಕ್ಕೆ ಕೇಂದ್ರ ಸರ್ಕಾರವು ‘ಪದ್ಮಶ್ರೀ’ ಪ್ರಶಸ್ತಿ ನೀಡಿತು. ನಾನು ‌‘ನರೇಂದ್ರ ಮೋದಿ’ ಅವರ ಕುರಿತು ಪದ್ಯ ಬರೆದಿದ್ದಕ್ಕೆ ಎಲ್ಲ ಸ್ಥಾನಮಾನಗಳು ಸಿಗುತ್ತಿವೆ ಎಂಬುದು ಕೆಲವರ ನಂಬಿಕೆಯಾದರೆ ನಾನು ಪ್ರಗಾಥದಲ್ಲಿ ಕಸ ಗುಡಿಸುವವರ ಮೇಲೆಯೂ ಬರೆದಿದ್ದೇನೆ’ ಎಂದರು.

ADVERTISEMENT

‘ಕವಿ ಮತ್ತು ಲೇಖಕರು ಸಂಸ್ಕೃತಿಯ ವಕ್ತಾರರಾಗಿರುತ್ತಾರೆ. ದೊಡ್ಡರಂಗೇಗೌಡರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದು ಬೇಡ ಎಂದಾದಲ್ಲಿ ನನ್ನ ಪಾಡಿಗೆ ನಾನು ಇರುತ್ತೇನೆ. ನಾನು ಯಾರಿಗೂ ದಮ್ಮಯ್ಯ ಎಂದು, ಪಾದಕ್ಕೆ ನಮಸ್ಕಾರ ಮಾಡಿ ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಿ ಎಂದು ಹೇಳಲು ಹೋದವನಲ್ಲ. ಮಾತೃ ಸಂಸ್ಥೆಯವರು ಈ ಮುದುಕ60 ವರ್ಷ ಕನ್ನಡ ಸೇವೆಯನ್ನು ಮಾಡಿಕೊಂಡು ಬಂದಿದ್ದಾನೆ ಎಂಬ ಕಾರಣಕ್ಕೆ ಈ ಬಾರಿ ಪಟ್ಟ ಕಟ್ಟಿದ್ದಾರೆ. ಅಧ್ಯಕ್ಷ ಸ್ಥಾನದಲ್ಲಿ ಕುಳಿತ ಬಳಿಕ ಕೋಡುಗಳೇನು ಬರುವುದಿಲ್ಲ. ಅಧ್ಯಕ್ಷ ಸ್ಥಾನದಲ್ಲಿ ಕುಳಿತಿಲ್ಲ ಎಂಬ ಕಾರಣಕ್ಕೆ ಯಾರೂ ನಮ್ಮನ್ನು ಮರೆಯುವುದಿಲ್ಲ. ಒಂದು ವೇಳೆ ಮರೆತರೂ ಶ್ರೀಸಾಮಾನ್ಯರಲ್ಲಿ ಸಾಮಾನ್ಯನಾಗಿ ಇರಲು ಬಯಸುತ್ತೇನೆ’ ಎಂದು ಹೇಳುತ್ತಾ ಭಾವುಕರಾದರು.

‘ಕನ್ನಡಿಗರಿಗೆ ಸಂಸ್ಕಾರವಿದೆ. ದೂರದ ಈಜಿಪ್ಟ್‌ನಲ್ಲಿ ಕನ್ನಡದ ಕುರುಹು ಇದೆ. ಗ್ರೀಸ್‌ನ ಪಠ್ಯದಲ್ಲಿ ಕೆಲವೊಂದು ಕನ್ನಡದ ಪದಗಳಿವೆ. ಇಷ್ಟು ಭವ್ಯವಾದ ಸಂಸ್ಕೃತಿ ನಮ್ಮಲ್ಲಿ ಇರುವಾಗ ಏಕೆ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಬೇಕು. ನಮ್ಮ ಮುಂದಿನ ಪೀಳಿಗೆಯಾದರೂ ನಾವು ಕನ್ನಡಿಗರು ಎಂದು ಹೆಮ್ಮೆಪಡುವಂತಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಭಾಷೆಯನ್ನು ಕೊಂಡೊಯ್ಯಬೇಕು. ಇಂಗ್ಲಿಷಿಗೆ ಪರ್ಯಾಯವಾಗಿ ಶಿಕ್ಷಣ ಸೇರಿದಂತೆ ಎಲ್ಲೆಡೆ ಕನ್ನಡ ಬೆಳೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ವಿಮರ್ಶಾ ವಲಯ ಕಡೆಗಣನೆ’

‘ವಿಮರ್ಶಾ ವಲಯ ಮತ್ತು ಜನ ನನ್ನ ಗದ್ಯವನ್ನು ಅಷ್ಟಾಗಿ ಓದಿಲ್ಲ. ಜೀವನ ಕಥನವನ್ನೂ ಕೆಲವರು ಮಾತ್ರ ಓದಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ನನ್ನದೆ ಆದ ಆದರ್ಶಗಳಿವೆ. ಅವನ್ನು ಬಿಡುವ ಸ್ಥಿತಿಯಲ್ಲಿ ಇಲ್ಲ. ಅದು ನನಗೆ ಅಂಟಿಕೊಂಡು ಬಂದಿದೆ. ನನ್ನನ್ನು ಗೀತ ರಚನೆಗಾರ ಎಂದೇ ಎಲ್ಲರೂ ನೋಡುತ್ತಿದ್ದಾರೆ. ನಿರ್ದೇಶಕರಿಗೆ ನಾನು ಅವರು ಹೇಳಿದ ರೀತಿಯಲ್ಲಿ ಗೀತೆಗಳನ್ನು ಬರೆದುಕೊಡುವುದಿಲ್ಲ. ನನಗೆ ನನ್ನದೆ ಆದ ಶೈಲಿಯಿದೆ. ‘ಜನುಮದ ಜೋಡಿಯ’ ಬಳಿಕ ಶಿಷ್ಟ ಭಾಷೆಯ ಗೀತೆಗಳನ್ನು ಬರೆದದ್ದೇ ಕಡಿಮೆ’ ಎಂದರು.

‘1970ರಲ್ಲಿ ಉತ್ತರ ಭಾರತದಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದೆ. ಅವತ್ತೆ ಮಾನಸಿಕವಾಗಿ ದೀಕ್ಷೆ ಪಡೆದುಕೊಂಡಿದ್ದೆ. ಬದುಕನ್ನು ಸರಳವಾಗಿಸಿಕೊಂಡು, ಸಂತನ ರೀತಿಯಲ್ಲಿ ಬದುಕುತ್ತಿದ್ದೇನೆ. ರಾಮಕೃಷ್ಣ ಪರಮಹಂಸರ ಜೀವನವನ್ನು ಆಧರಿಸಿದ ಒಂದು ಮಹಾಕಾವ್ಯವನ್ನು ಈಗ ಬರೆಯುತ್ತೀದ್ದೇನೆ’ ಎಂದು ವಿವರಿಸಿದರು.

‘ಕನ್ನಡಕ್ಕೆ ಹೆಚ್ಚುವರಿ ಅಂಕ ನೀಡಿ’

‘ಕನ್ನಡ ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರಗಳು ಪ್ರಯತ್ನಿಸಿದ್ದರೆ ನಾವು ಇಷ್ಟೊಂದು ಹೀನಾಯ ಸ್ಥಿತಿಗೆ ತಲುಪುತ್ತಿರಲಿಲ್ಲ. ಪ್ರತಿ ಶಾಸಕ, ಸಂಸದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡರೆ ಕನ್ನಡ ಶಾಲೆಗಳು ಉತ್ತಮ ಸ್ಥಿತಿಗೆ ತಲುಪಬಹುದು. ಎಲ್ಲ ವಿದ್ಯುನ್ಮಾನ ತಂತ್ರಜ್ಞಾನಗಳಲ್ಲಿ ಇಂಗ್ಲಿಷಿಗೆ ಪರ್ಯಾಯವಾಗಿ ಕನ್ನಡವನ್ನು ಅಳವಡಿಸಬೇಕು’ ಎಂದು ದೊಡ್ಡರಂಗೇಗೌಡ ಒತ್ತಾಯಿಸಿದರು.

‘ಮಕ್ಕಳು 8ನೇ ತರಗತಿವರೆಗೆ ಕನ್ನಡ ಕಲಿತಲ್ಲಿ ಹೆಚ್ಚು ಜ್ಞಾನ ವೃದ್ಧಿಯಾಗುತ್ತದೆ. ಕನ್ನಡದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ 5 ಅಥವಾ 10 ಅಂಕವನ್ನು ಹೆಚ್ಚುವರಿಯಾಗಿ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಬೇಕು. ಆಗ ಉದ್ಯೋಗ ಪಡೆದುಕೊಳ್ಳಲು ಕೂಡ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.