ADVERTISEMENT

‘ನಾನು ಪ್ರಧಾನಿಯಾದ್ದೂ ಆಕಸ್ಮಿಕವೇ’: ಇದು ದೇವೇಗೌಡ ಪ್ರತಿಕ್ರಿಯೆ

ಪಿಟಿಐ
Published 30 ಡಿಸೆಂಬರ್ 2018, 6:25 IST
Last Updated 30 ಡಿಸೆಂಬರ್ 2018, 6:25 IST
   

ಬೆಂಗಳೂರು: ‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್’ ಹೆಸರಿನ ಸಿನಿಮಾ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಕಾವೇರಿರುವ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ‘ನಾನೂ ಆಕಸ್ಮಿಕ ಪ್ರಧಾನಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ 85 ವರ್ಷದ ದೇವೇಗೌಡ, ‘ನಿಜ ಹೇಳಬೇಕು ಅಂದ್ರೆ ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ನಾನು ಆ ಪುಸ್ತಕವನ್ನೂ ಓದಿಲ್ಲ. ಇಂಥದ್ದಕ್ಕೆಲ್ಲಾ ಯಾರು ಅನುಮತಿ ನೀಡಿದರು? ನಿಜ ಅಂದ್ರೆ ನಾನು ಪ್ರಧಾನಿಯಾಗಿದ್ದೂ ಆಕಸ್ಮಿಕವೇ’ ಎಂದು ಹೇಳಿದರು.

1996ರ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯೆಯ ಸ್ಥಾನಗಳನ್ನು ಯಾವ ಪಕ್ಷವೂ ಗೆದ್ದಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಗಳನ್ನು ದೂರ ಇರಿಸಿದ್ದತೃತೀಯ ರಂಗದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಇದಕ್ಕೆ ಕಾಂಗ್ರೆಸ್ ಹೊರಗಿನಿಂದ ಬೆಂಬಲಿಸಿತ್ತು. 1996ರ ಜೂನ್‌ 1ರಿಂದ 1997ರ ಏಪ್ರಿಲ್‌ 21ರವರೆಗೆ ದೇವೇಗೌಡರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ತನ್ನ ಬೆಂಬಲವನ್ನು ಹಿಂಪಡೆದಿತ್ತು.

ADVERTISEMENT

2004ರಿಂದ 2008ರ ವರೆಗೆ ಮನಮೋಹನ್‌ ಸಿಂಗ್‌ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್‌ ಬರು ಬರೆದಿರುವ ‘ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್’ ಹೆಸರಿನ ಪುಸ್ತಕ ಆಧಾರಿತ ಸಿನಿಮಾದ ಟ್ರೇಲರ್ ಈಚೆಗೆ ಬಿಡುಗಡೆಯಾಗಿದೆ.ವಿಜಯ್‌ ರತ್ನಾಕರ್‌ ಗುಟ್ಟೆ ನಿರ್ದೇಶನದ ಸಿನಿಮಾದಲ್ಲಿಅನುಪಮ್‌ ಖೇರ್‌ ಅವರು ಸಿಂಗ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 11ರಂದು ಸಿನಿಮಾ ತೆರೆ ಕಾಣಲಿದೆ.

ಸಿನಿಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌,ಇದು(ಸಿನಿಮಾ) ನಮ್ಮ ಪಕ್ಷದ ವಿರುದ್ಧ ಬಿಜೆಪಿ ಮಾಡುತ್ತಿರುವ ಪ್ರಚಾರ ಎಂದು ಆರೋಪಿಸಿದೆ. ಮನಮೋಹನ್‌ ಸಿಂಗ್‌ ಅವರು2004–2014 ಅವಧಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಲ್ಲಿ ಪ್ರಧಾನಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.