ADVERTISEMENT

ದೇವರ ಒಲಿಸಿಕೊಳ್ಳಲು ಭಕ್ತಿಯೇ ದಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 10:59 IST
Last Updated 8 ಜೂನ್ 2022, 10:59 IST
   

ಮೈಸೂರು: ದೇವರು ಹಾಗೂ ಗುರುಗಳನ್ನು ಒಲಿಸಿಕೊಳ್ಳಲು ಶ್ರದ್ಧೆ- ಭಕ್ತಿಯೊಂದೇ ದಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬುಧವಾರ ದತ್ತಾತ್ರೇಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀಗಳಿಗೆ ಜನ್ಮದಿನೋತ್ಸವದ ಶುಭಕಾಮನೆ ತಿಳಿಸಿ ಅವರು ಮಾತನಾಡಿದರು.

ದೇವರ‌ ಮುಂದೆ ನಮಗೆ ಏನು ಬೇಕೆಂಬ ಮನೋಕಾಮನೆಗಳನ್ನು ಇಟ್ಟರೆ ಈಡೇರುವುದಿಲ್ಲ. ಭಕ್ತಿಯಿಂದ ನಡೆದುಕೊಂಡರೆ ಈಡೇರುತ್ತದೆ ಎಂದರು.

ADVERTISEMENT

ಲೋಕಕಲ್ಯಾಣಕ್ಕಾಗಿ ನಮ್ಮ ಸಂಕಲ್ಪವಿದ್ದರೆ ದೇವರ ಆಶೀರ್ವಾದ ಸದಾ ಇರುತ್ತದೆ. ಉತ್ಕೃಷ್ಟ ವಾದ ಪ್ರೀತಿಯೇ ಭಕ್ತಿ ಎಂದು ತಿಳಿಸಿದರು.

ನಾನು ಜನಿಸಿದ್ದು ಹುಬ್ಬಳ್ಳಿಯ ದತ್ತಾತ್ರೇಯ ಓಣಿಯಲ್ಲಿ. ನಾನು ಶಾಲೆಗೆ ಹೋಗುವಾಗಲೆಲ್ಲಾ ಅಲ್ಲಿನ ಮಾರುಕಟ್ಟೆ ಬಳಿ‌ ಇರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ‌ಮಾಡುತ್ತಿದ್ದೆ ಎಂದು ಸ್ಮರಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ‌ಆಶೀರ್ವಾದ‌‌ ನಾಡಿನ ಪ್ರತಿಯೊಬ್ಬರಿಗೂ ಅದರಲ್ಲೂ ವಿಶೇಷವಾಗಿ ಅಂಗವಿಕಲರು ಹಾಗೂ ಬಡಜನರಿಗೆ ಸಿಗಲಿ ಎಂದು ಆಶಿಸಿದರು.

ಶ್ರೀಗಳು ಹುಬ್ಬಳ್ಳಿಗೆ ಬಂದು ದತ್ತಾತ್ರೇಯ ಸ್ವಾಮಿ ದರ್ಶನ ಪಡೆಯುವಂತೆ ಬೊಮ್ಮಾಯಿ ಮನವಿ ಮಾಡಿದರು.

ಶ್ರೀಗಳು ಮೇ 22ರಂದು ನನಗೆ ಇಲ್ಲಿಗೆ‌ ಬರಲು ಆಹ್ವಾನ ನೀಡಿದ್ದರು. ಆದರೆ, ದಾವೂಸ್‌ನ ವಿಶ್ವ ಆರ್ಥಿಕ ಸಮ್ಮೇಳನದ ಕಾರಣದಿಂದ ಇಲ್ಲಿಗೆ ಬರಲು ಆಗಲಿಲ್ಲ. ಇಂದು ದತ್ತನ ಶಕ್ತಿಯೇ ನನ್ನನ್ನು ಇಲ್ಲಿಗೆ‌ ಕರೆಸಿಕೊಂಡಿದೆ ಎಂದು ನುಡಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಜೀವನದಲ್ಲಿ ನಡೆಯುವುದೆಲ್ಲವೂ ಒಳ್ಳೆಯದಕ್ಕಾಗಿಯೇ ಎಂದು ಭಾವಿಸಬೇಕು. ಏನೇ ಎದುರಾದರೂ ಅದಕ್ಕೆ ಯಾರು ಕಾರಣ? ಏನು ಕಾರಣ? ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜನರು ಸತ್ವಗುಣ ಇಚ್ಚಿಸುವುದಿಲ್ಲ. ಹೀಗಾಗಿ ಸುಳ್ಳು ಹೇಳುತ್ತಾರೆ. ಸತ್ಯವೇ ಜೀವನ, ಸತ್ಯವೇ ಪ್ರಾಣ ಎಂಬುದನ್ನು ಮನುಷ್ಯ ಅರಿಯಬೇಕು. ಇದಕ್ಕೆ ಗುರುವಿನ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಶ್ರೀದತ್ತನ ರೂಪ ಮೂರು ತತ್ವಗಳನ್ನು ಹೇಳುತ್ತದೆ. ಗುರು ಅವತಾರವೇ ಶ್ರೇಷ್ಠ. ಅದೇ ದತ್ತಾತ್ರೇಯ ‌ಅವತಾರ ಎಂದು ಬಣ್ಣಿಸಿದರು.

ನಮ್ಮ ಆಶ್ರಮಕ್ಕೆ ಹಲವಾರು ಮುಖ್ಯಮಂತ್ರಿಗಳು, ರಾಷ್ಟ್ರಪತಿಗಳು, ಪ್ರಧಾನಿಗಳು ಬಂದಿದ್ದಾರೆ. ಬಹಳಷ್ಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ, ಹಾಲಿ ಮುಖ್ಯಮಂತ್ರಿ ವಿಭಿನ್ನವಾಗಿ ಕಾಣುತ್ತಾರೆ. ಅದೇ ಅವರ‌ ವಿಶೇಷತೆ. ಇದು ನಾಡಿನ ಸೌಭಾಗ್ಯ ಎಂದು ತಿಳಿಸಿದರು.

ನಾನು ಮೈಸೂರಿನ ಈ ಪೀಠದಲ್ಲೇ ಇರಬೇಕೆಂದು ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ನಿರ್ಧಾರ ‌ಮಾಡುತ್ತೇನೆ ಎಂದು ಹೇಳಿದರು.

ಬೊಮ್ಮಾಯಿ ಅವರು ಮುಂದೆಯೂ ಹೀಗೆಯೇ ರಥ ನಡೆಸಲಿ ಎಂದು ಆಶೀರ್ವದಿಸಿದರು

ಲೋಕಕಲ್ಯಾಣಕ್ಕಾಗಿ ಒಂದು ಕೋಟಿ ದತ್ತ ಯಜ್ಞ, ಲಕ್ಷ ಶ್ರೀಸೂಕ್ತ ಹೋಮ ಮಾಡಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಕಿರಿಯ ಸ್ವಾಮೀಜಿ ದತ್ತ ವಿಜಯಾನಂದತೀರ್ಥ ಮುಖ್ಯಮಂತ್ರಿಯನ್ನು ಆಶ್ರಮದ ‌ಪರವಾಗಿ ಗೌರವಿಸಿದರು.

ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದ ಮುಂಭಾಗದಲ್ಲಿ ನಗರ್ ಚೆಲುವಾಂಬ ಆಸ್ಪತ್ರೆಗೆ ಅವಧೂತ‌ ದತ್ತಪೀಠದ ವತಿಯಿಂದ ನೀಡಲಾದ‌ ₹ 28 ಲಕ್ಷ ಮೌಲ್ಯದ ಆಂಬ್ಯುಲೆನ್ಸ್‌ ಅನ್ನು ಮುಖ್ಯಮಂತ್ರಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಸವಿತಾ ಹಾಗೂ ಎಂಎಂಸಿ ಪ್ರಾಂಶುಪಾಲೆ ಡಾ.ದಾಕ್ಷಾಯಿಣಿ ಅವರಿಗೆ ಹಸ್ತಾಂತರಿಸಿದರು.

ಗಣಪತಿ ಸಚ್ಚಿದಾನಂದ ಶ್ರೀಗಳ 80ನೇ ಜನ್ಮದಿನೋತ್ಸವದ ಅಂಗವಾಗಿ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಶ್ರೀಗಳ ಜನ್ಮ ಸ್ಥಳವಾದ ಮೇಕೆದಾಟಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಸ್ವಾಸ್ಥ್ಯಕ್ಕಾಗಿ ಆಂಬ್ಯುಲೆನ್ಸ್ ಸಹಾಯ ಮಾಡುವ ಉದ್ದೇಶ ಹೊಂದಿದ್ದರು.ಅದರಂತೆಯೇ ಆಂಬ್ಯುಲೆನ್ಸ್ ಕೊಡುಗೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಮೇಯರ್‌ ಸುನಂದಾ ಪಾಲನೇತ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.