ADVERTISEMENT

ಪೊಲೀಸರಿಗೆ ಕಡ್ಡಾಯವಾಗಿ ಪಿಪಿಇ ಕಿಟ್‌ ನೀಡಬೇಕು: ಪೊಲೀಸ್ ಮಹಾ ನಿರ್ದೇಶಕ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮೇ 2020, 15:57 IST
Last Updated 18 ಮೇ 2020, 15:57 IST
ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್
ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್   

ಬೆಂಗಳೂರು: ‘ಕೊರೊನಾ ನಿಯಂತ್ರಣ ಕರ್ತವ್ಯದಲ್ಲಿ ತೊಡಗಿರುವ ಎಲ್ಲ ಪೊಲೀಸ್ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರ ಪೊಲೀಸ್ ಕಮಿಷನರ್‌ ಹಾಗೂ ಐಜಿಪಿಗಳಿಗೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

‘ಕರ್ತವ್ಯದ ವೇಳೆ ಜನರ ಸಂಪರ್ಕದಲ್ಲಿರುವುದರಿಂದ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ. ಚೆಕ್‌ ಪೋಸ್ಟ್, ಆಸ್ಪತ್ರೆ, ಕಂಟೈನ್ಮೆಂಟ್ ವಲಯಗಳಲ್ಲಿರುವ ಸಿಬ್ಬಂದಿ ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯ ಇರುವುದರಿಂದ ಕಡ್ಡಾಯವಾಗಿ ಪಿಪಿಇ ಕಿಟ್ ನೀಡಬೇಕು’ ಎಂದೂ ಅವರು ಸೂಚಿಸಿದ್ದಾರೆ.

‘ಕೋವಿಡ್‌ 19 ಕರ್ತವ್ಯದಲ್ಲಿರುವ ಪೊಲೀಸರನ್ನು ಸೋಂಕು ಪರೀಕ್ಷೆಗೆ ಒಳಪಡಿಸುತ್ತಿರಬೇಕು. ಸೋಂಕಿನಿಂದ ಸಿಬ್ಬಂದಿ ಮೃತಪಟ್ಟರೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಕರ್ತವ್ಯದ ವೇಳೆ ಇತರೆ ಕಾರಣಗಳಿಂದ ಮೃತಪಟ್ಟರೂ ನಿಯಮಾನುಸಾರ ಇತರೆ ಸೌಲಭ್ಯಗಳು ದೊರಕುವಂತೆ ನೋಡಿಕೊಳ್ಳಬೇಕು’ ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೆಲವು ಕಡೆ ಸಿಬ್ಬಂದಿ ರಜೆ ಇಲ್ಲದೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಪುನರಾವರ್ತನೆ ಆಗಬಾರದು. ಸಿಬ್ಬಂದಿಗೆ ವಿಶ್ರಾಂತಿ ನೀಡಬೇಕಾಗಿದ್ದು, ಇದಕ್ಕಾಗಿ ಪಾಳಿ ವ್ಯವಸ್ಥೆ ಮಾಡಬೇಕು. ವಾರಕ್ಕೊಮ್ಮೆ ಸಿಬ್ಬಂದಿಯ ಪಾಳಿ ಬದಲಾಯಿಸಿ ವಾರದ ರಜೆ ನೀಡಬೇಕಾದ್ದು ಕಡ್ಡಾಯ’ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಸೂಕ್ಷ್ಮಪ್ರದೇಶಗಳಲ್ಲಿ, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಹಾಗೂ ಚೆಕ್ ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಆತಂಕದಲ್ಲಿದ್ದಾರೆ. ಇದನ್ನು ಮೇಲಾಧಿಕಾರಿಗಳು ಗಮನಿಸಬೇಕು. ಸೂಕ್ತ ಆರೋಗ್ಯ ವ್ಯವಸ್ಥೆ ಕಲ್ಪಿಸುವ ಜತೆಗೆ ಆತ್ಮಸ್ಥೈರ್ಯ ತುಂಬಿ ಸಿಬ್ಬಂದಿ ಜತೆ ನಿರಂತರ ಸಂಪರ್ಕದಲ್ಲಿರಬೇಕು’ ಎಂದೂ ಈ ಆದೇಶದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.