ಧರ್ಮಸ್ಥಳ ಪ್ರಕರಣ: 13ನೇ ಜಾಗದಲ್ಲಿ ಅಗೆಯುವ ಕಾರ್ಯ ಆರಂಭ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಯಂತ್ರದ ಮೂಲಕ ನೆಲವನ್ನು ಅಗೆಯುವ ಕಾರ್ಯ ಮಂಗಳವಾರ ಆರಂಭವಾಗಿದೆ.
ಇಲ್ಲಿ ನೆಲವನ್ನು ಅಗೆಯುವುದನ್ನು ಆರಂಭಿಸುವ ಮುನ್ನ ವಿಶೇಷ ತನಿಖಾ ತಂಡ (ಎಸ್ಐಟಿ) ನೆಲದಡಿ ಮೃತದೇಹಗಳ ಅವಶೇಷ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ತಪಾಸಣೆ ನಡೆಸಲಾಗಿತ್ತು. ಜಿಪಿಆರ್ ಮೂಲಕ ಸಂಗ್ರಹಿಸಿರುವ ನೆಲದಡಿಯ ಚಿತ್ರಣಗಳನ್ನು ತಜ್ಞರು ವಿಶ್ಲೇಷಣೆಗೆ ಒಳಪಡಿಸಿದ್ದರು.
ಇದಾಗಿ ಸುಮಾರು 3 ಗಂಟೆ ಬಳಿಕ ಸಣ್ಣ ಯಂತ್ರವನ್ನು ಬಳಸಿ ನೆಲವನ್ನು ಅಗೆಯಲಾಯಿತು. ಬಳಿಕ ದೊಡ್ಡ ಯಂತ್ರವನ್ನು ತರಿಸಿಕೊಂಡು ಅಗೆಯುವ ಕಾರ್ಯ ಮುಂದುವರಿಸಲಾಗಿದೆ.
ಯಾವ ಕಡೆ ಅಗೆಯಬೇಕೆಂದು ಸಾಕ್ಷಿ ದೂರುದಾರ ಸ್ಥಳದಲ್ಲೇ ಇದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರೂ ಸ್ಥಳದಲ್ಲಿದ್ದಾರೆ.
ಎಸ್ಐಟಿ ಡಿಜಿಪಿ ಪ್ರಣವ್ ಮೊಹಾಂತಿ ಸ್ಥಳಕ್ಕೆ ಭೇಡಿ ನೀಡಿ ನಿರ್ದೇಶನ ನೀಡಿ ನಿರ್ಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.