ಸದನ
ಬೆಂಗಳೂರು: ಧರ್ಮಸ್ಥಳದ ಪ್ರಕರಣದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿಯ ವಿ.ಸುನಿಲ್‌ಕುಮಾರ್ ಅವರು ಆಡಿದ ಮಾತಿನಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಧರಣಿಗೆಂದು ಸಭಾಧ್ಯಕ್ಷರ ಪೀಠದತ್ತ ಧಾವಿಸಿದಾಗ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಲಾಪವನ್ನು ಕೆಲಕಾಲ ಮುಂದೂಡಿದರು.
ಸಭಾಧ್ಯಕ್ಷರ ಕೊಠಡಿಯಲ್ಲಿ ಮುಖ್ಯಮಂತ್ರಿಯವರ ಮಧ್ಯಸ್ಥಿಕೆಯಲ್ಲಿ ಬಿಜೆಪಿ ನಾಯಕರ ಜತೆ ಸಂಧಾನ ಸಭೆ ನಡೆಸಿದ ಬಳಿಕ ಪುನಃ ಕಲಾಪ ಆರಂಭವಾಯಿತು.
‘ಧರ್ಮಸ್ಥಳದ ವಿರುದ್ಧ ಕಾಂಗ್ರೆಸ್ ಸರ್ಕಾರ ಮತ್ತು ಹೈಕಮಾಂಡ್ ಷಡ್ಯಂತ್ರ ಮಾಡಿದೆ’ ಎಂದು ಸುನಿಲ್‌ಕುಮಾರ್ ಹೇಳಿದ್ದು, ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
‘ಆ ಸಾಲನ್ನು ಕಡತದಿಂದ ತೆಗೆಯಬೇಕು’ ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.
‘ಅವುಗಳನ್ನು ತೆಗೆದುಹಾಕಿ’ ಎಂದು ಸಭಾಧ್ಯಕ್ಷ ಖಾದರ್ ಸೂಚಿಸಿದರು. ಅದಕ್ಕೆ ಸುನಿಲ್ ಮತ್ತು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ‘ಅದರಲ್ಲಿ ಅಸಂಸದೀಯ ಪದ ಏನಿದೆ’ ಎಂದು ಪ್ರಶ್ನಿಸಿದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದತ್ತ ಧಾವಿಸಿದರು.
‘ನಾವು ಎಸ್ಐಟಿಯನ್ನು ವಿರೋಧಿಸಿಲ್ಲ. ಯೂಟ್ಯೂಬ್ ಮೂಲಕ ಅಪಪ್ರಚಾರ ನಡೆದಿದೆ. ಇದಕ್ಕೆ ಏಕೆ ಕಡಿವಾಣ ಹಾಕಿಲ್ಲ. ಇದರ ಹಿಂದೆ ಒಬ್ಬ ಮುಸುಕುಧಾರಿ ಇಲ್ಲ. ಹಲವಾರು ಜನ ಮುಸುಕು ಹಾಕಿ ಕೆಲಸ ಮಾಡುತ್ತಿದ್ದಾರೆ. ತನಿಖೆಗೆ ಒತ್ತಾಯಿಸಿದವರು ಅವರ ಹಿಂದಿರುವವರು, ಅವರಿಗೆ ಹಣಕಾಸು ನೆರವು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ನೀವು ಏನೂ ಹೇಳಿಲ್ಲ. ಧರ್ಮಸ್ಥಳಕ್ಕೆ ಕೆಸರು ಎರಚೋದು ಅವರ ಉದ್ದೇಶ, ನಿಮ್ಮ ಸರ್ಕಾರದ ಉದ್ದೇಶವೂ ಅದೇ ಆಗಿದೆ. ನಿಮ್ಮ ಹೈಕಮಾಂಡ್ ನಿರ್ದೇಶನದ ಮೇರೆಗೆ ಎಸ್‌ಐಟಿ ಮಾಡಲಾಗಿದೆ’ ಸುನಿಲ್ ಕುಮಾರ್ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಯ ಎಸ್.ಸುರೇಶ್‌ಕುಮಾರ್ ಮಾತನಾಡಿ, ಸರ್ಕಾರ ಊಹಾಪೋಹಗಳಿಗೆ ಇತಿಶ್ರೀ ಹಾಕಬೇಕು. ತನಿಖಾ ವರದಿ ಬರುವುದಕ್ಕೂ ಮೊದಲೇ ‘ಸೋಷಿಯಲ್ ಮೀಡಿಯಾ ಟ್ರಯಲ್’ ನಡೆದಿದೆ. ಅವಾಚ್ಯ, ಅವಹೇಳನಕಾರಿ ಪದಗಳನ್ನು ಬಳಸುತ್ತಿದ್ದಾರೆ. ತಮಿಳುನಾಡು ಮತ್ತು ಕೇರಳದ ರಾಜಕಾರಣಿಗಳ ಅಪವಿತ್ರ ಕಾರ್ಯಸೂಚಿ ಇದರಲ್ಲಿ ಅಡಗಿದೆ ಎಂದರು.
ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ, ‘ಧರ್ಮಸ್ಥಳ ಪವಿತ್ರ ಕ್ಷೇತ್ರ. ನಾವು ಅಲ್ಲಿನ ಭಕ್ತರು. ಆ ಕ್ಷೇತ್ರಕ್ಕೆ ಕಳಂಕ ತರುವ ಕೆಲಸ ನಡೆದಿದೆ. ಆ ಕಳಂಕದಿಂದ ಮುಕ್ತರಾಗಲು ಎಸ್ಐಟಿ ತನಿಖೆ ನಡೆದಿದೆ. ಧರ್ಮಸ್ಥಳದ ಹೆಸರನ್ನು ಅಪವಿತ್ರಗೊಳಿಸುವ ಕೆಲಸ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರ ಹಿಂದಿರುವ ಪಟ್ಟಭದ್ರರಿಗೆ ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.
ಜೆಡಿಎಸ್‌ನ ಸುರೇಶ್‌ಬಾಬು , ‘ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿರುವವರು ಮತ್ತು ಅದಕ್ಕೆ ಕುಮ್ಮಕ್ಕು ನೀಡುತ್ತಿರುವವರನ್ನು ತನಿಖೆಗೆ ಒಳಪಡಿಸಬೇಕು. ಇವರ ಬಾಯಿ ಬಿಡಿಸಿದರೆ ಪಿತೂರಿಕೋರರು ಯಾರು ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.