ADVERTISEMENT

ಡಿಜಿಟಲ್ ಯುಗದಲ್ಲಿ ಆಮೆ ನಡಿಗೆ

ಒಳನೋಟ

ಎಸ್.ರವಿಪ್ರಕಾಶ್
Published 30 ನವೆಂಬರ್ 2019, 18:30 IST
Last Updated 30 ನವೆಂಬರ್ 2019, 18:30 IST

ಬೆಂಗಳೂರು: ಆಧುನಿಕ ಸಂದರ್ಭದಲ್ಲಿ ಯಾವುದೇ ಭಾಷೆ, ಸಾಹಿತ್ಯ ಉಳಿಯಬೇಕಾದರೆ ಡಿಜಿಟಲ್ ವೇದಿಕೆಯಲ್ಲಿ ಅಂತಹ ಭಾಷೆಯ ಬಳಕೆ ಅತ್ಯಗತ್ಯ. ಇದರಿಂದ ಆ ಭಾಷೆಯ ಪ್ರಸ್ತುತತೆಯೂ ಹೆಚ್ಚುತ್ತದೆ. ಈ ವಿಚಾರದಲ್ಲಿ ಕನ್ನಡ ಸಂಕಷ್ಟದಲ್ಲಿದೆ. ಬೆಂಗಳೂರು ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ನಿಜ. ಆದರೆ, ಡಿಜಿಟಲ್‌ ನಾಗಾಲೋಟದ ನಡುವೆ ಕನ್ನಡ ತೆವಳುತ್ತಿದೆ.

ರಾಜ್ಯ ಸರ್ಕಾರಕ್ಕೆ ‘ನುಡಿ’ ತಂತ್ರಾಂಶ ಅಭಿವೃದ್ಧಿಪಡಿಸಲು ಸಾಕಷ್ಟು ಸಮಯ ಬೇಕಾಯಿತು. ಆದರೆ, ಕೆ.ಪಿ.ರಾವ್‌ ಅವರು ರಾಜಧಾನಿಯಿಂದ ದೂರದ ಉಡುಪಿಯಲ್ಲಿ ಕುಳಿತು ತ್ವರಿತಗತಿಯಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದರು. ಅದು ಜನಪ್ರಿಯವೂ ಆಯಿತು. ‘ನುಡಿ’ಯ ಕಥೆ ಹಾಗಿರಲಿ, ಅಂತರ ಜಾಲ ಕನ್ನಡ ಜ್ಞಾನಕೋಶವಾದ ‘ಕಣಜ’ವೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ವೆಬ್‌ಪೇಜ್‌ಗಳು ಓಬೀರಾಯನ ಕಾಲದಲ್ಲೇ ಉಳಿದಿವೆ.

ನಮ್ಮಲ್ಲಿ ಪ್ರತಿಭಾವಂತ ತಂತ್ರಜ್ಞರಿಗೆ ಕೊರತೆ ಇಲ್ಲ. ಕನ್ನಡದ ಮೇಲಿನ ಪ್ರೀತಿಯಿಂದ ಚೌಕಾಸಿ ಮಾಡದೇ ಕೆಲಸ ಮಾಡಿಕೊಡುವವರೂ ಇದ್ದಾರೆ. ಆದರೆ, ಅಧಿಕಾರಿಗಳ ಮನಸ್ಥಿತಿ ಮಾತ್ರ ವ್ಯತಿರಿಕ್ತ. ರಸ್ತೆ ನಿರ್ಮಾಣದ ಟೆಂಡರ್‌ ಕರೆಯುವಾಗ ಅಧಿಕಾರಿಗಳು ಎಂತಹ ಮನಸ್ಥಿತಿ ಹೊಂದಿರುತ್ತಾರೋ, ಭಾಷೆ ವಿಚಾರದಲ್ಲೂ ಅದೇ ಮನಸ್ಥಿತಿ ಇರುತ್ತದೆ. ಹೀಗಾಗಿ, ಪ್ರತಿಭಾವಂತರಿದ್ದರೂ ಡಿಜಿಟಲ್‌ ಜಗತ್ತಿನಲ್ಲಿಕನ್ನಡ ಭಾಷೆ ಯನ್ನು ಉತ್ತುಂಗಕ್ಕೆ ಒಯ್ಯಲು ಸಾಧ್ಯವಾಗುತ್ತಿಲ್ಲ.

ADVERTISEMENT

ಕೀಲಿಮಣೆ ಮತ್ತು ಅಕ್ಷರ ಹೇಗಿರಬೇಕು ಎಂಬ ಚರ್ಚೆಯೇ ಇನ್ನೂ ಮುಗಿದಿಲ್ಲ. ಮುಖ್ಯವಾಗಿ ಕನ್ನಡ ಸಾಹಿತ್ಯ, ಶಾಸನಗಳು, ಹಸ್ತಪ್ರತಿಗಳನ್ನು ನಾವು ಇಂದಿನ ಮತ್ತು ಮುಂದಿನ ಪೀಳಿಗೆಗೆ ಹೇಗೆ ತಲುಪಿಸಬೇಕು ? ಕಂಪ್ಯೂಟರ್‌, ಇಂಟರ್‌ನೆಟ್‌,ಮೊಬೈಲ್‌ ಇತ್ಯಾದಿಗಳ ಅಪ್ಲಿಕೇಷನ್‌ಗಳಲ್ಲಿ ಕನ್ನಡ ಬಳಕೆ ಹೇಗೆ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿಲ್ಲ ಎನ್ನುತ್ತಾರೆ ಹಿರಿಯ ತಂತ್ರಜ್ಞ ಉದಯಶಂಕರ ಪುರಾಣಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.