ADVERTISEMENT

ಅಂಗವಿಕಲರಿಗೆ ಪಾದಚಾರಿ ಮಾರ್ಗ: ನೋಟಿಸ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 15:19 IST
Last Updated 16 ಜುಲೈ 2025, 15:19 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಅಂಗವಿಕಲರು, ಹಿರಿಯ ನಾಗರಿಕರಿಗೆ ತಡೆರಹಿತ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಪಾದಚಾರಿ ಮಾರ್ಗಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರ ಸಾರಿಗೆ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು‌ ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮೈಕೊ ಲೇ ಔಟ್‌ ನಿವಾಸಿ ದೇವರಾಯ ಸಮುದ್ರಂ ವೆಂಕಟೇಶ ವಿಜಯಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯೋಗದ ರಾಜ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.

ADVERTISEMENT

ಅರ್ಜಿಯಲ್ಲಿ ಏನಿದೆ?:

‘ನಗರ ಭೂ ಸಾರಿಗೆ ನಿರ್ದೇಶಕರು 2014ರಲ್ಲಿ ಹೊರಡಿಸಿರುವ ಪಾದಚಾರಿ ಮೂಲಸೌಕರ್ಯ ಯೋಜನೆ, ಅನುಷ್ಠಾನ ಹಾಗೂ 2016ರಲ್ಲಿ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಆನುಷ್ಠಾನಕ್ಕೆ ತರಲು ನಿರ್ದೇಶಿಸಬೇಕು. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅಡಚಣೆ ರಹಿತ, ಸುರಕ್ಷಿತ ಪಾದಚಾರಿ ಮಾರ್ಗ, ರಸ್ತೆ–ಸಾರಿಗೆ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯ ನೀಡುವ ಆದೇಶಗಳನ್ನು ಜಾರಿಗೊಳಿಸಲು ವಿಶೇಷಾಧಿಕಾರ ಹೊಂದಿದ ಸಮಿತಿಯೊಂದನ್ನು ರಚಿಸಬೇಕು. ಅಂಗವಿಕಲ ಸ್ನೇಹಿ ಮೂಲಸೌಕರ್ಯಗಳನ್ನು ಒದಗಿಸಿ ಅವುಗಳ ನಿರ್ವಹಣೆಗೆ ವಾರ್ಡ್ ಮಟ್ಟದಿಂದ ಪಾಲಿಕೆ ಆಯುಕ್ತರ ಮಟ್ಟದವರಿಗೆ ಸೂಕ್ತ ಆಡಳಿತ ವ್ಯವಸ್ಥೆ ರೂಪಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ರಾಜ್ಯದ ನ್ಯಾಯಮೂರ್ತಿಗಳ ವರ್ಗಾವಣೆ ಸಲ್ಲ’:

‘ರಾಜ್ಯ ಹೈಕೋರ್ಟ್‌ನ ಸ್ಥಳೀಯ ನ್ಯಾಯಮೂರ್ತಿಗಳನ್ನು ಅನ್ಯ ರಾಜ್ಯಗಳಿಗೆ ವರ್ಗಾವಣೆ ಮಾಡುವ ಪದ್ಧತಿ ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆತಂಕ ವ್ಯಕ್ತಪಡಿಸಿದೆ. ಈ ಸಂಬಂಧ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಸಹಿ ಮಾಡಿರುವ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ‘ಅನ್ಯ ರಾಜ್ಯದ ನ್ಯಾಯಮೂರ್ತಿಗಳನ್ನು ನಾವು ಸ್ವಾಗತಿಸುತ್ತೇವೆ ನಿಜ. ಆದರೆ ಸ್ಥಳೀಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಅರ್ಥೈಸಿಕೊಂಡು ಸೂಕ್ತ ನ್ಯಾಯ ಒದಗಿಸಲು ಅನುಕೂಲವಾಗುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಘವು ಈಗಾಗಲೇ ಇಂತಹ ವರ್ಗಾವಣೆ ನೀತಿಗೆ ವಿರುದ್ಧವಾಗಿದೆ ಎಂಬುದನ್ನು ಈಗ ಮತ್ತೊಮ್ಮೆ ಗಮನಕ್ಕೆ ತರಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.  ‘ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಇಂದಿನ ದಿನಗಳಲ್ಲಿ ಅನ್ಯ ರಾಜ್ಯದ ನ್ಯಾಯಮೂರ್ತಿಗಳಿಗೆ ಸ್ಥಳೀಯ ಭಾಷೆಯ ತೊಡಕುಂಟಾಗುತ್ತದೆ. ಸರ್ಕಾರದ ಅಧಿಸೂಚನೆ ಸುತ್ತೋಲೆ ಆದೇಶಗಳನ್ನು ಕನ್ನಡದಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡುವ ಪ್ರಕ್ರಿಯೆಗೆ ಹೆಚ್ಚಿನ ಸಮಯ ತಗಲುತ್ತದೆ. ಅಂತೆಯೇ ಇದು ಕಕ್ಷಿದಾರರ ಮೇಲೆ ಆರ್ಥಿಕ ಹೊರೆಯನ್ನು ಹೇರುತ್ತದೆ’ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.