ADVERTISEMENT

1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಆಹಾರ ಧಾನ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 14:19 IST
Last Updated 6 ನವೆಂಬರ್ 2020, 14:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 108 ದಿನಗಳ ಬಿಸಿಯೂಟದ ಬದಲು ಆಹಾರ ಭದ್ರತೆ ಭತ್ಯೆಯಂತೆ ಆಹಾರ ಧಾನ್ಯ ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ಜೂನ್‌ನಿಂದ ಆಕ್ಟೋಬರ್‌ ತಿಂಗಳವರೆಗೆ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ 108 ದಿನಗಳಿಗೆ ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ತಿಳಿಸಿದೆ.

ಆಹಾರ ಧಾನ್ಯಗಳನ್ನು ಖರೀದಿಸಿ ದಾಸ್ತಾನು ಇಡಲು ಗೋದಾಮುಗಳಲ್ಲಿ ಸ್ಥಳಾವಕಾಶ ಅಭಾವ ಇರುವುದರಿಂದ ಎರಡು ಹಂತಗಳಲ್ಲಿ ಧಾನ್ಯಗಳನ್ನು ವಿತರಿಸಲಾಗುವುದು. ಮೊದಲ ಹಂತದಲ್ಲಿ ಜೂನ್‌ ಮತ್ತು ಜುಲೈ ತಿಂಗಳ 53 ದಿನಗಳಿಗೆ ಮತ್ತು ಎರಡನೇ ಹಂತದಲ್ಲಿ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ 55ದಿನಗಳವರೆಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಹೇಳಿದೆ.

ADVERTISEMENT

ಈಗಾಗಲೇ ಕೆಎಫ್‌ಸಿಎಸ್‌ಸಿಗೆ ಜೂನ್‌ ಮತ್ತು ಜುಲೈ ತಿಂಗಳ 53 ದಿನಗಳ ಆಹಾರ ಧಾನ್ಯಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದು, ಖರೀದಿ ಪ್ರಕ್ರಿಯೆ ಮುಗಿಸಿ ಸರಬರಾಜು ಕಾರ್ಯ ಪ್ರಗತಿಯಲ್ಲಿದೆ. ಕೆಎಫ್‌ಸಿಎಸ್‌ಸಿ ಸಂಸ್ಥೆಯು ಆಹಾರ ಧಾನ್ಯಗಳನ್ನು ಈಗಾಗಲೇ ಸರಬರಾಜು ಮಾಡಿರುವ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ವಿತರಣೆ ಕಾರ್ಯ ಆರಂಭಿಸಬಹುದು ಎಂದು ಸೂಚಿಸಿದೆ.

ಎಷ್ಟು ಆಹಾರ ಧಾನ್ಯ ವಿತರಣೆ

* 1 ರಿಂದ 5 ನೇ ತರಗತಿ ಮಕ್ಕಳಿಗೆ 4 ಕೆ.ಜಿ 500 ಗ್ರಾಂ ಅಕ್ಕಿ, 800 ಗ್ರಾಂ ಗೋಧಿ ಮತ್ತು 3 ಕೆ.ಜಿ 74 ಗ್ರಾಂ ತೊಗರಿ ಬೇಳೆ

*6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ 6 ಕೆ.ಜಿ 750 ಗ್ರಾಂ ಅಕ್ಕಿ, 1 ಕೆ.ಜಿ 200 ಗ್ರಾಂ ಗೋಧಿ ಮತ್ತು 4 ಕೆ.ಜಿ 611 ಗ್ರಾಂ ತೊಗರಿ ಬೇಳೆ

*9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 7 ಕೆ.ಜಿ 910 ಗ್ರಾಂ ಅಕ್ಕಿ, 4 ಕೆ.ಜಿ 611 ಗ್ರಾಂ ತೊಗರಿಬೇಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.