ADVERTISEMENT

ರಾಜ್ಯದಾದ್ಯಂತ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಗೆ DC ನೇತೃತ್ವದಲ್ಲಿ ಸಮಿತಿ

ಉತ್ಪಾದಕರಿಂದ ಪೆಟ್‌ ಬಾಟಲ್‌ ವಾಪಸ್‌ ಖರೀದಿ ಬಾಧ್ಯತೆಯ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 0:01 IST
Last Updated 18 ಜೂನ್ 2025, 0:01 IST
bottle
bottle   

ಬೆಂಗಳೂರು: ರಾಜ್ಯದಲ್ಲಿ ಪ್ಲಾಸ್ಟಿಕ್‌ ಬಾಟಲ್‌ ತ್ಯಾಜ್ಯವನ್ನು ನಿಯಂತ್ರಿಸಲು, ಬಾಟಲ್‌ಗಳ ಉತ್ಪಾದಕರು ಮರು ಖರೀದಿಸುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಬಗ್ಗೆ ನಿಗಾವಹಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

ಪಾಲಿಥಿಲೀನ್ ಟೆರಫ್ಥಲೇಟ್‌ (ಪೆಟ್‌) ಬಾಟಲ್‌ಗಳ ತ್ಯಾಜ್ಯ ನಿರ್ವಹಣೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಿಯಮಗಳ (2016) ಅನುಷ್ಠಾನ ಹಾಗೂ ಮೇಲ್ವಿಚಾರಣೆ ನಡೆಸಲು ರಚಿಸಲಾಗಿರುವ ಸಮಿತಿಗೆ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿ ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಮೇಲ್ವಿಚಾರಣಾ ಸಮಿತಿ ರಚನೆ ಹಾಗೂ ಮರಗಳ ಸುತ್ತಲೂ ಕಾಂಕ್ರೀಟ್‌ ತೆರವಿಗೆ ಹೊರಡಿಸಲಾಗಿರುವ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.

ADVERTISEMENT

ಪೆಟ್‌ ಬಾಟಲ್‌ ತ್ಯಾಜ್ಯದ ನಿರ್ವಹಣೆ ಮೇಲೆ ವಿಶೇಷ ಗಮನಹರಿಸಿ, ಪ್ಲಾಸ್ಟಿಕ್‌ ನಿರ್ವಹಣೆ ನಿಯಮಗಳನ್ನು ಅನುಷ್ಠಾನಗೊಳಿಸಿ, ಪ್ಲಾಸ್ಟಿಕ್‌ ತ್ಯಾಜ್ಯ ನಿಯಂತ್ರಿಸಬೇಕು. ಪ್ಲಾಸ್ಟಿಕ್‌ ಮಾಲಿನ್ಯ ಕಡಿಮೆ ಮಾಡುವ ಜತೆಗೆ, ಪ್ಲಾಸ್ಟಿಕ್‌ ಬಳಕೆಯನ್ನು ನಿಯಂತ್ರಿಸಿ, ಕಾರ್ಯವಿಧಾನಗಳನ್ನು ಜಾರಿಗೊಳಿಸಲು ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ರಚಿಸಲಾಗಿದೆ.

ಜಿಲ್ಲಾಮಟ್ಟದ ಸಮಿತಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಕಚೇರಿ ಆಡಳಿತಾತ್ಮಕ ಬೆಂಬಲ ಒದಗಿಸಬೇಕು. ಸಮನ್ವಯ ಸಾಧಿಸಿ, ವರದಿಗಳನ್ನು ಸಿದ್ಧಪಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಪೆಟ್‌ ಬಾಟಲ್‌ ತಯಾರಿಕೆ, ಮಾರಾಟದಲ್ಲಿರುವ ಉತ್ಪಾದಕರು, ಆಮದುದಾರರು ಮತ್ತು ಬ್ರ್ಯಾಂಡ್‌ ಮಾಲೀಕರು, ‘ಉತ್ಪಾದಕರಿಗೆ ಹೊಣೆಗಾರಿಕೆ ವಿಸ್ತರಣೆ’ಯ (ಇಪಿಆರ್) ನಿಯಮಗಳನ್ನು ಅನುಪಾಲನೆ ಮಾಡುತ್ತಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಜಿಲ್ಲಾಮಟ್ಟದ ಸಮಿತಿಯ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಲಾಗಿದೆ.

ಮಾರ್ಗಸೂಚಿ: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪರಿಸರ (ರಕ್ಷಣೆ) ಕಾಯ್ದೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ನಿಯಮಗಳಡಿ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ಗಾಗಿ ಇಪಿಆರ್ ಕುರಿತ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಉತ್ಪಾದಕರು, ಆಮದುದಾರರು, ಬ್ರ್ಯಾಂಡ್‌ ಮಾಲೀಕರು (ಪಿಐಬಿಒ), ಪ್ಲಾಸ್ಟಿಕ್‌ ತ್ಯಾಜ್ಯ ಮರು ಬಳಕೆದಾರರು, ಪ್ಲಾಸ್ಟಿಕ್‌ ತ್ಯಾಜ್ಯದಿಂದ ಇಂಧನ ಸಂಸ್ಕಾರಕರ ನೋಂದಣಿ ಪ್ರಕ್ರಿಯೆಯನ್ನು ಕೇಂದ್ರೀಕೃತಗೊಳಿಸಿ, ಇಪಿಆರ್‌ ಪೋರ್ಟಲ್‌ ಪ್ರಾರಂಭಿಸಿದೆ. ಇದರಂತೆ ನೋಂದಣಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನಿರ್ದೇಶನ ನೀಡಿದೆ.

ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ’ ಎಂದಿದೆ. ಇದು ಕಷ್ಟದ ಕೆಲಸವಾದರೂ ನಾವು ಮಾಡಲೇಬೇಕಾಗಿದೆ

-ಸಿದ್ದರಾಮಯ್ಯ ಮುಖ್ಯಮಂತ್ರಿ

ಮೇಲ್ವಿಚಾರಣಾ ಸಮಿತಿ

ಅಧ್ಯಕ್ಷ– ಜಿಲ್ಲಾಧಿಕಾರಿ ಸದಸ್ಯರು– ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ (ಪುರಸಭೆ/ ನಗರ ಪಾಲಿಕೆ/ ಪಂಚಾಯಿತಿ) ಸದಸ್ಯರು ಸದಸ್ಯ ಸಂಚಾಲಕ– ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ.

ಸಮಿತಿಯ ಜವಾಬ್ದಾರಿ

* ಉತ್ಪಾದಕರು ಬ್ರ್ಯಾಂಡ್‌ ಮಾಲೀಕರು ಸ್ಥಳೀಯ ತಯಾರಿಕರಿಂದ ದಾಖಲೆ ಪಡೆದುಕೊಂಡು ಜಿಲ್ಲೆಯಲ್ಲಿ ಉತ್ಪಾದಿಸಿದ ಬಳಸಿದ ಮತ್ತು ಮಾರಾಟವಾದ ಪೆಟ್‌ ಬಾಟಲ್‌ಗಳ ಪ್ರಮಾಣದ ನಿಖರವಾದ ದತ್ತಾಂಶವನ್ನು ಕ್ರೋಡೀಕರಿಸಬೇಕು * ಸಿಪಿಸಿಬಿಯಲ್ಲಿರುವ ಇಪಿಆರ್‌ ಪೋರ್ಟಲ್‌ ಮತ್ತು ಇಪಿಆರ್‌ನಲ್ಲಿನ ವಾರ್ಷಿಕ ವರದಿಗಳಲ್ಲಿ ಸಲ್ಲಿಸಲಾಗಿರುವ ದತ್ತಾಂಶವನ್ನು ಪರಿಶೀಲಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಳೀಯ ಸಂಸ್ಥೆಗಳೊಂದಿಗೆ ನೋಂದಾಯಿತ ಬಾಟಲ್‌ ತಯಾರಕರ ಕ್ರಿಯಾಯೋಜನೆಗಳನ್ನು ಪರಿಶೀಲಿಸಿ ಅವಲೋಕನ ನಡೆಸಬೇಕು * ಜಿಲ್ಲೆಯಲ್ಲಿರುವ ಉತ್ಪಾದಕರು ಮತ್ತು ಬ್ರ್ಯಾಂಡ್‌ ಮಾಲೀಕರು ತಮ್ಮ ಇಪಿಆರ್‌ ಜವಾಬ್ದಾರಿಗಳ ಪ್ರಕಾರ ಪಿಇಟಿ ಬಾಟಲ್‌ ಸಂಗ್ರಹ ವಿಂಗಡಣೆ ಮತ್ತು ಹಿಂತಿರುಗಿಸುವ ಕಾರ್ಯವಿಧಾನಗಳ ಬಗ್ಗೆ ಅರಿವು ಮತ್ತು ಪ್ರಚಾರ ಕೈಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು * ಸಮಿತಿಯು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಪ್ರಗತಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಚರ್ಚಿಸಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿಗೆ ಕ್ರಿಯಾ ಅಂಶಗಳು ಮತ್ತು ಸಂಶೋಧನೆಗಳೊಂದಿಗೆ ಸಂಕ್ಷಿಪ್ತ ವರದಿ ಸಲ್ಲಿಸಬೇಕು

ಮರದ ಸುತ್ತಲಿನ ಕಾಂಕ್ರೀಟ್‌ ತೆರವಿಗೆ ಆದೇಶ

ನಗರಗಳಲ್ಲಿರುವ ರಸ್ತೆ ಬದಿಯ ಮರಗಳ ಸುತ್ತ ಒಂದು ಮೀಟರ್‌ ಪ್ರದೇಶದಲ್ಲಿರುವ ಕಾಂಕ್ರೀಟ್‌ ಕಲ್ಲು ಸಿಮೆಂಟ್‌ ಬ್ಲಾಕ್‌ಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ರಸ್ತೆಗಳಲ್ಲಿರುವ ಮರಗಳ ಬುಡಗಳನ್ನು ಕಾಂಕ್ರೀಟ್‌ ಡಾಂಬರು ಅಥವಾ ಇಂಟರ್‌ಲಾಕ್‌ ಪೇವರ್‌ಗಳಿಂದ ಮಾಡಿದ ಪಾದಚಾರಿ ಮಾರ್ಗದಿಂದ ಮುಚ್ಚಲಾಗುತ್ತಿದೆ. ಇದರಿಂದ ಮರಗಳ ಆರೋಗ್ಯಕರ ಬೆಳವಣಿಗೆ ಬದುಕುಳಿಯುವಿಕೆ ಮೇಲೆ ದುಷ್ಪರಿಣಾಮ ಉಂಟಾಗಿದೆ. ನೀರಿನ ಒಳಹರಿವು ಇಲ್ಲದಿರುವುದು ಬೇರುಗಳ ಪೋಷಣೆ ಮೇಲೆ ಪರಿಣಾಮ ಬೀರುತ್ತಿದೆ. ರಸ್ತೆಬದಿಯ ಮರಗಳ ಸುತ್ತ ಜಾಗವಿಲ್ಲದೆ ಬೇರು ಆಳಕ್ಕೆ ಇಳಿಯದೆ ಮಳೆ ಗಾಳಿಯಲ್ಲಿ ಬಿದ್ದು ಪ್ರಾಣಹಾನಿ ಆಸ್ತಿ ಹಾನಿಯಾಗುವುದನ್ನು ತಪ್ಪಿಸಬೇಕು. ಜತೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) 2025ರ ಮೇ 21ರಂದು ನೀಡಿರುವ ನಿರ್ದೇಶನಗಳನ್ವಯ ಮರಗಳ ಸುತ್ತ ಕನಿಷ್ಠ ಒಂದು ಮೀಟರ್‌ ಜಾಗಬಿಡಬೇಕು. ಆದ್ದರಿಂದ ಎಲ್ಲ ರೀತಿಯ ನಿರ್ಮಾಣಗಳನ್ನು ತೆರವುಗೊಳಿಸಬೇಕು. ಇನ್ನು ಮುಂದೆ ರಾಜ್ಯದ ಎಲ್ಲ ನಗರಗಳಲ್ಲಿ ಹಸಿರೀಕರಣ ಮಾಡುವ ಸಂದರ್ಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.