ಧಾರವಾಡ: ಕೋವಿಡ್–19 ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜುಲೈ 15ರಿಂದ 24ರವರೆಗೆ ಲಾಕ್‌ಡೌನ್ ಜಾರಿಗೆ ತರಲು ಜಿಲ್ಲಾಡಳಿತ ನಿರ್ಧರಿಸಿದೆ.
ಈ ವಿಷಯವನ್ನು ಸೋಮವಾರ ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ‘ಜುಲೈ 15ರ ಬೆಳಿಗ್ಗೆ 10ರಿಂದ 24 ರಾತ್ರಿ 8ರವರೆಗೆ ಈ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಹೀಗಾಗಿ ಜಿಲ್ಲೆಯಿಂದ ಹೊರಹೋಗುವವರಿಗೆ ಮತ್ತು ಒಳಬರುವವರಿಗೆ ಒಂದು ದಿನದ ಕಾಲಾವಕಾಶ ನೀಡಲಾಗಿದೆ. ಲಾಕ್‌ಡೌನ್ ಜಾರಿಯಾದ ನಂತರ ಅಂತರ ಜಿಲ್ಲಾ ಪಾಸ್ ಪಡೆಯುವುದನ್ನುಕಡ್ಡಾಯ ಗೊಳಿಸಲಾಗುವುದು. ಈ ಅವಧಿಯಲ್ಲಿ ನಿರ್ಮಾಣ ಕಾಮಗಾರಿ, ಕೈಗಾರಿಕಾ ಚಟುವಟಿಕೆ, ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ವಿನಾಯಿತಿ ಇರಲಿದೆ’ ಎಂದರು.
‘ಜಿಲ್ಲೆಯಲ್ಲಿ ಸದ್ಯ 657 ಸಕ್ರಿಯ ಪ್ರಕರಣಗಳಿದ್ದು, 33 ಜನ ಮೃತಪಟ್ಟಿದ್ದಾರೆ. ಎಷ್ಟೇ ಮುಂಜಾಗ್ರತಾ ಕ್ರಮಗಳು ಹಾಗೂ ಜಾಗೃತಿ ಕಾರ್ಯಗಳನ್ನು ನಡೆಸಿದರೂ ಜನರು ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಲಾಕ್‌ಡೌನ್ ಅನಿವಾರ್ಯವಾಗಿತ್ತು. ಸೋಮವಾರ ನಡೆದ ವಿಡಿಯೊ ಸಂವಾದದಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಡಳಿತಕ್ಕೆ ಬಿಟ್ಟರು. ಹೀಗಾಗಿ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಲಾಕ್‌ಡೌನ್ ಜಾರಿಗೊಳಿಸಲಾಗುತ್ತಿದೆ’ ಎಂದು ಶೆಟ್ಟರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.