ADVERTISEMENT

ಸಚಿವರ ಮಗನೇ ಕೇಸರಿ ಶಾಲು ಹಂಚಿಸಿದ್ದಾರೆ: ಡಿಕೆಶಿ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 9:10 IST
Last Updated 9 ಫೆಬ್ರುವರಿ 2022, 9:10 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಸಚಿವರ ಮಗನೇ ಕೇಸರಿ ಶಾಲು ಹಂಚಿಸಿದ್ದಾರೆ. 50 ಲಕ್ಷ ಶಾಲುಗಳಿಗೆ ಸೂರತ್‌ನಲ್ಲಿ ಆರ್ಡರ್ ಮಾಡಿದ್ದಾರೆ. ನಮಗೆಲ್ಲ ಗೊತ್ತಾಗಲ್ಲ ಅಂದುಕೊಂಡಿದ್ದಾರೆ. ನಮಗೂ ಮಾಹಿತಿ ನೀಡುವವರು ಇದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಶಿವಮೊಗ್ಗದಲ್ಲಿ ಮಂತ್ರಿ ಮಗ ಶಾಲು ಹಂಚಿದ್ದಾನೆ. ನನಗೇನೂ ಗೊತ್ತಿಲ್ಲ ಅಂದುಕೊಂಡಿದ್ದೀರಾ?’ ಎಂದು ಪ್ರಶ್ನಿಸಿದರು.

‘ನಾನು ಹುಟ್ಟಿದ ಧರ್ಮ ನಮಗೆ ಮುಖ್ಯ. ನಾನು‌ ಕುಂಕುಮ, ಗಂಧ ಇಡುತ್ತೇನೆ. ಅದನ್ನು ಬಿಡಿ ಅಂದರೆ ಬಿಡಲು ಆಗುತ್ತಾ? ನಾವು ಸಂವಿಧಾನಕ್ಕೆ ‌ಬದ್ದ. ನಾವು ಸಂವಿಧಾನದ ಮೇಲೆ ಪ್ರಮಾಣವಚನ ತೆಗೆದುಕೊಂಡಿದ್ದೇವೆ. ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇವೆ’ ಎಂದರು.

ADVERTISEMENT

‘ಮಕ್ಕಳಿಗೆ ಪ್ರಚೋದನೆ ಮಾಡಬೇಡಿ. ಮಕ್ಕಳಲ್ಲಿ ವಿಷಬೀಜ ಬಿತ್ತುವುದು ಬೇಡ. ಪಿತೂರಿ ನಾನು ಮಾಡುತ್ತಿಲ್ಲ. ಹಣ ಕೊಟ್ಟು ಹುಡುಗರಿಗೆ ಪ್ರಚೋದನೆ ಮಾಡಿದ್ದಾರೆ. ರಾತ್ರೋರಾತ್ರಿ ಎಲ್ಲಿಂದ ಶಾಲು, ಪೇಟಾ ಬಂತು ಎನ್ನುವುದು ನನಗೂ ಗೊತ್ತಿದೆ’ ಎಂದರು.

‘ಕಂಬ ಬೇರೆ, ಧ್ವಜ ಬೇರೆನಾ? ಅದಕ್ಕೊಂದು ಸಂಹಿತೆ ಇದೆ. ಎಲ್ಲ ಧ್ವಜ ಅಲ್ಲಿ ಹಾರಿಸಲು ಆಗಲ್ಲ. ರಾಷ್ಟ್ರ ಧ್ವಜ ಹಾರಿಸುವ ಕಂಬದ ಮೇಲೆ ಆ ಧ್ವಜ (ಕೇಸರಿ) ಹಾರಿಸುವುದು ಸರಿಯಾ‘ ಎಂದು ಪ್ರಶ್ನಿಸಿದ ಅವರು, ‘ರಾಷ್ಟ್ರ ಧ್ವಜದ ಮೇಲೆ ಕೇಸರಿ ಶಾಲು ಹಾಕಿದ್ದು ತಪ್ಪು ಎಂದು ಸಚಿವ ಅಶೋಕ ಒಪ್ಪಿಕೊಂಡಿದ್ದಾರೆ. ಅದು ಅಶೋಕ ಅವರ ದೊಡ್ಡತನ’ ಎಂದರು.

ಪ್ರಿಯಾಂಕ ಗಾಂಧಿ ಅವರು ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ‘ಅವರು ಹೇಳಿರುವುದು ಸಂವಿಧಾನ ಬದ್ಧವಾಗಿದೆ. ಸಂವಿಧಾನದಲ್ಲಿ ಏನು ಅವಕಾಶ ಇದೆಯೊ ಅದನ್ನು ಹೇಳಿದ್ದಾರೆ ಅಷ್ಟೆ’ ಎಂದು ಸಮರ್ಥನೆ ನೀಡಿದರು.

ಶಾಸಕ ರೇಣುಕಾಚಾರ್ಯ ಅವರ ಆಕ್ಷೇಪಾರ್ಹ ಹೇಳಿಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಅವರು ಮುತ್ತುರಾಜ. ಅವರ ಬಗ್ಗೆ ಮಾತಾಡಲ್ಲ. ನಮ್ಮನೆ ಪಕ್ಕದ ಮುತ್ತುರಾಜ್ ಅಲ್ಲ. ಅವರು ಬೇರೆ ಮುತ್ತುರಾಜ’ ಎಂದು ವ್ಯಂಗ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.