ADVERTISEMENT

₹8.6 ಕೋಟಿ ಹಣ ನಮ್ಮದೇ, ಇ.ಡಿ ವಿಚಾರಣೆಗೆ ಹಾಜರಾಗುವೆ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 7:27 IST
Last Updated 30 ಆಗಸ್ಟ್ 2019, 7:27 IST
   

ಬೆಂಗಳೂರು: ದೆಹಲಿಯಲ್ಲಿ ದೊರೆತ₹8.6 ಕೋಟಿ ಹಣ ನಮ್ಮದೇಎಂದುಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ, ಇ.ಡಿ ಅಧಿಕಾರಿಗಳು ನನ್ನ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರಿಗೆ ಜಾರಿ ನಿರ್ದೇಶನಾಲಯ(ಇ.ಡಿ) ಸಮನ್ಸ್‌ ನೀಡಿರುವ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.

ADVERTISEMENT

ಅಮಿತ್ ಶಾ, ಮೋದಿ ಸೇರಿದಂತೆ ಯಾರು ಬೇಕಾದರೂ ನನ್ನ ಟಾರ್ಗೆಟ್‌ ಮಾಡಲಿ, ನಾನು ಕಾನೂನು ಮತ್ತು ರಾಜಕೀಯವಾಗಿ ಎದುರಿಸುತ್ತೇನೆ, ನನ್ನನ್ನು,ನನ್ನ ಕುಟುಂಬ ಹಾಗೂ ಪಕ್ಷವನ್ನು ಮುಗಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳು ವಿಚಿತ್ರವಾಗಿ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ ವ್ಯಾಖ್ಯಾನ ಮಾಡಿವೆ. ನಾನು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಕಾರ್ಯಕರ್ತನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಗುಜರಾತ್, ಮಹಾರಾಷ್ಟ್ರ ಹಾಗೂ ನಮ್ಮ ಶಾಸಕರನ್ನು‌ ಕಾಪಾಡುವ ಜವಾಬ್ದಾರಿ ವಹಿಸಿದ್ದೆ. ಪಕ್ಷದ ಸೂಚನೆ ಪ್ರಕಾರ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಐಟಿ ಅಧಿಕಾರಿಗಳು ‌ಕೇಂದ್ರ ಪೊಲೀಸ್ ‌ಪಡೆ‌ ತಂದು ದಾಳಿ ಮಾಡಿದ್ದರು ಎಂದುಆರೋಪ‍ ಮಾಡಿದರು.

ನಾನು ಕಾನೂನಿಗೆ ಗೌರವ ಕೊಡುವ ಶಾಸಕ,ನನಗೆ ಬಂದಿರುವ ಎಲ್ಲ ‌ನೋಟಿಸ್‌ಗಳಿಗೆ ಉತ್ತರ ನೀಡಿದ್ದೇನೆ. ನಾನು ಮಧ್ಯಮ ಕುಟುಂಬದವನು. ನನ್ನ ತಾಯಿ ಆಸ್ತಿಯನ್ನು ಬೇನಾಮಿ‌ ಆಸ್ತಿ ಎಂದು ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.‌ ನಾನು ಕೋರ್ಟ್ ಮೊರೆ ಹೋಗಿದ್ದು ‌ಕಾನೂನು ಹೋರಾಟ ನಡೆಸುತ್ತೇನೆ ಎಂದು ಶಿವಕುಮಾರ್ ಹೇಳಿದರು.

ನಾನು ಯಾವುದಕ್ಕೂ ‌ಹೆದರುವವನಲ್ಲ. ಎಲ್ಲೂ‌ ಓಡಿ ಹೋಗಲ್ಲ, ‌ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ,ಆಪರೇಷನ್ ಕಮಲದಲ್ಲಿ ಕೋಟ್ಯಂತರ ‌ರೂ ವ್ಯವಹಾರ ನಡೆದಿದೆ, ವಿಧಾನಸಭೆಯಲ್ಲಿ ಶಾಸಕ ಶ್ರೀನಿವಾಸ ಗೌಡ ಬಹಿರಂಗವಾಗಿ ಆಮಿಷದ ಬಗ್ಗೆ ಹೇಳಿದ್ದರು, ಇ.ಡಿ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ನಾನು ಹೊರದೇಶಗಳಲ್ಲಿ ಯಾವುದೇ ಆಸ್ತಿ ಹೊಂದಿಲ್ಲ.‌ ನಮ್ಮ ತಾಯಿ ಹೆಸರಿನಲ್ಲಿದ್ದ ಆಸ್ತಿಯನ್ನು ಬೇನಾಮಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಇದಕ್ಕೆಲ್ಲ ಹೆದರುವ ಜಾಯಮಾನದವನಲ್ಲ. ಕಾನೂನಿನ ಪ್ರಕಾರ ಸೂಕ್ತ ಉತ್ತರನೀಡಲು ಸಿದ್ದ ಎಂದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ. ನಮ್ಮ ಅವಧಿಯಲ್ಲಿ ‌ಜಾರಿಯಾಗಿದ್ದ ಯೋಜನೆಗಳು, ಕಾರ್ಯಕ್ರಮಗಳು ಬಗ್ಗೆ ತನಿಖೆ ನಡೆಸಲು ಪ್ರತಿದಿನ ಸೂಚಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಸೇಡಿನ ರಾಜಕಾರಣ ಮಾಡಲ್ಲ ಎಂದಿದ್ದರು. ಇದೀಗ ಅವರು ನಡೆದುಕೊಳ್ಳುತ್ತಿರುವ ರೀತಿಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ನನಗೆ ನೀಡಿದ್ದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ, ನನ್ನ ಬೆಂಬಲಕ್ಕೆ ಯಾರು ಬರುತ್ತಾರೋ, ಇಲ್ಲವೋ ಎಂಬ ಬಗ್ಗೆ ತಲೆ ಕೆಡಸಿಕೊಂಡಿಲ್ಲ. ಪ್ರೀತಿ ಹಾಗೂ ಗೌರವದಿಂದ ಪಕ್ಷದ ‌ಕೆಲಸ ಮಾಡಿದ್ದೇನೆ ಎಂದರು.

ಮುಖ್ಯಮಂತ್ರಿ ‌ಯಡಿಯೂರಪ್ಪ ಕನಕಪುರದಲ್ಲಿ ಆರಂಭವಾಗಬೇಕಿದ್ದ ವೈದ್ಯಕೀಯ ‌ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿ ಆದೇಶ ಮಾಡಿದ್ದಾರೆ. ಶನಿವಾರದೊಳಗೆ ಈ ಆದೇಶ ವಾಪಾಸ್ ಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.