ADVERTISEMENT

ಡಿಕೆಶಿಗೆ ಸೋಮವಾರವೂ ಇ.ಡಿ. ಬುಲಾವ್‌

ಶನಿವಾರ ಸತತ ಎಂಟೂವರೆ ಗಂಟೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:46 IST
Last Updated 31 ಆಗಸ್ಟ್ 2019, 19:46 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಂದ ಶನಿವಾರವೂ ವಿಚಾರಣೆ ಎದುರಿಸಿದ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರಿಗೆ ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಲಾಗಿದೆ.

ಶುಕ್ರವಾರ ಮಧ್ಯರಾತ್ರಿವರೆಗೆ ವಿಚಾರಣೆ ನಡೆಸಿದ್ದ ಇ.ಡಿ. ಅಧಿಕಾರಿಗಳ ಸೂಚನೆಯ ಮೇರೆಗೆ ಶನಿವಾರ ಬೆಳಿಗ್ಗೆ 11ಕ್ಕೆ ಕೆಲವು ದಾಖಲೆಗಳೊಂದಿಗೆ ಮತ್ತೆ ಇಲ್ಲಿನ ಖಾನ್‌ ಮಾರ್ಕೆಟ್‌ ಬಳಿಯ ಲೋಕನಾಯಕ ಭವನದಲ್ಲಿರುವ ಪ್ರಧಾನ ಕಚೇರಿಗೆ ಹಾಜರಾದ ಶಿವಕುಮಾರ್‌ ರಾತ್ರಿ 8.45ರವರೆಗೆ ವಿಚಾರಣೆ ಎದುರಿಸಿದರು.

ಶಿವಕುಮಾರ್‌, ಅವರ ಪತ್ನಿ ಮತ್ತು ಹತ್ತಿರದ ಸಂಬಂಧಿಗಳ ಆಸ್ತಿ ಕುರಿತ ವಿವರಗಳನ್ನೆಲ್ಲ ವಿಚಾರಣೆಯ ವೇಳೆ ಕಲೆ ಹಾಕಲಾಯಿತು ಎಂದು ಇ.ಡಿ. ಮೂಲಗಳು ಹೇಳಿವೆ.

ADVERTISEMENT

‘ಮಧ್ಯಾಹ್ನ ಕೇವಲ ಒಂದು ಗಂಟೆ ಊಟಕ್ಕೆ ಹೊರಗೆ ಕಳುಹಿಸಿದ್ದನ್ನು ಬಿಟ್ಟರೆ ಅಧಿಕಾರಿಗಳು ನನ್ನನ್ನು ಸತತ ವಿಚಾರಣೆಗೆ ಒಳಪಡಿಸಿದ್ದಾರೆ. ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಲಾಗಿದೆ. ಗೌರಿ ಹಬ್ಬದ ಅಂಗವಾಗಿ ಹಿರಿಯರಿಗೆ ಎಡೆ ಕೊಡುವ ಪೂಜೆ ನೆರವೇರಿಸುವುದರಿಂದ ಸೋಮವಾರ ವಿಚಾರಣೆಗೆ ಬರುವುದು ಅಸಾಧ್ಯ ಎಂದು ಹೇಳಿದರೂ, ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ’ ಎಂದು ರಾತ್ರಿ ಕಚೇರಿಯಿಂದ ಹೊರಬಂದ ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‘ಭಾನುವಾರ ಬೆಂಗಳೂರಿಗೆ ಹೋಗಬೇಕೋ ಅಥವಾ ಇಲ್ಲೇ ಇದ್ದು ವಿಚಾರಣೆಗೆ ಬರಬೇಕೋ ಎಂಬುದನ್ನು ವಕೀಲರೊಂದಿಗೆ ಸಮಾಲೋಚನೆ ನಡೆಸಿದ ನಂತರ ನಿರ್ಧರಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.