ADVERTISEMENT

ನಾವೂ‌ ಪೇಸಿಎಂ ಟಿ-ಶರ್ಟ್ ಧರಿಸಿ ಪಾಲ್ಗೊಳ್ಳುತ್ತೇವೆ, ಏನ್ಮಾಡ್ಕೊತಿರಾ?: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 13:22 IST
Last Updated 1 ಅಕ್ಟೋಬರ್ 2022, 13:22 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಮೈಸೂರು: ಭಾರತ್ ಜೋಡೊ ಯಾತ್ರೆಯಲ್ಲಿ ನಾನು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ‌ಸಿದ್ದರಾಮಯ್ಯ ಮತ್ತು ನಾಯಕರು ಪೇಸಿಎಂ ಟಿ-ಶರ್ಟ್ ಧರಿಸಿ ಪಾಲ್ಗೊಳ್ಳುತ್ತೇವೆ. ಬಿಜೆಪಿಯವರು ಅದೇನ್ ಮಾಡ್ಕೊತಾರೋ‌ ನೋಡುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.

ಭಾರತ್ ಜೋಡೊ ಪಾದಯಾತ್ರೆ ನಡುವೆ ನಂಜನಗೂಡು ತಾಲ್ಲೂಕಿನ ಕಳಲೆ ಗೇಟ್‌ ಬಳಿ‌ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ಗುಂಡ್ಲುಪೇಟೆಯಲ್ಲಿ ಪಾದಯಾತ್ರೆ ವೇಳೆ‌ ನಮ್ಮ ಕಾರ್ಯಕರ್ತ ಪೇಸಿಎಂ ಟಿ-ಶರ್ಟ್ ಹಾಕಿದ್ದರೆ ಕೇಸ್ ಮಾಡಿದ್ದಾರೆ. ಇಂಥದ್ದಕ್ಕೆಲ್ಲ ನಾವು ಹೆದರುವುದಿಲ್ಲ; ಜಗ್ಗುವುದಿಲ್ಲ ಎಂದು ಹೇಳಿದರು.

ಭಾರತ್ ಜೋಡೊ ಯಾತ್ರೆಯು ಪಕ್ಷದ ಕಾರ್ಯಕ್ರಮ ಅಲ್ಲ. ಮನಸ್ಸು ಮನಸ್ಸುಗಳನ್ನು ಜೋಡಿಸುವ ಕಾರ್ಯಕ್ರಮ ಆಗಿದೆ. ಸಮಸ್ಯೆಗಳಿಗೆ ‌ಉತ್ತರ ಕಂಡು ಹಿಡಿಯಲು‌ ಹಾಗೂ ಆತಂಕಗೊಂಡಿರುವ ಜನರಿಗೆ ಧೈರ್ಯ ತುಂಬಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ADVERTISEMENT

ಸರ್ಕಾರವು ಶೇ 40ರಷ್ಟು ಕಮಿಷನ್‌ನಲ್ಲಿ ಮುಳುಗಿದೆ. ರೈತರು ಸೇರಿದಂತೆ ಎಲ್ಲಾ ವರ್ಗದವರೂ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಭ್ರಷ್ಟಾಚಾರ, ಅಶಾಂತಿ, ಮತ್ತೊಂದೆಡೆ ರೈತರ ಸಮಸ್ಯೆ ಹಾಗೂ‌ ನಿರುದ್ಯೋಗ ಕಾಡುತ್ತಿದೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಮ್ಮ ಬೆಳವಣಿಗೆ ಸಹಿಸಲಾಗದೆ ಬಿಜೆಪಿಯವರು ಟೀಕೆ, ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅದಕ್ಕೆ ನಾವು ಹೆದರುವುದಿಲ್ಲ. ಜನರ ಪರವಾಗಿ ಹೋರಾಟ ಮಾಡುವುದನ್ನು ಮುಂದುವರಿಸದೆ ಬಿಡುವುದಿಲ್ಲ' ಎಂದರು.

ಜನರ ಗಮನ ಬೇರೆಡೆ ಸೆಳೆಯಲು ಕ್ಷುಲ್ಲಕ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಅವರ ತಟ್ಟೆಯಲ್ಲಿ ನೂರೆಂಟು ಹೆಗ್ಗಣಗಳು ಬಿದ್ದಿದ್ದರೂ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.