ADVERTISEMENT

ಸಿ.ಡಿ, ಲಂಚದ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು: ಡಿಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 10:48 IST
Last Updated 14 ಜನವರಿ 2021, 10:48 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಸಿ.ಡಿ ತೋರಿಸಿ ಬ್ಲಾಕ್‌ಮೇಲ್‌ ಮಾಡಿದವರು ಮತ್ತು ಲಂಚ ನೀಡಿದವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ಶಾಸಕರು, ಮುಖಂಡರು ಮಾಡಿರುವ ಆರೋಪಗಳ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವ ಸಿ.ಡಿಯನ್ನು ತೋರಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೆದರಿಸಲಾಗಿದೆ? ಸಿ.ಡಿಯಲ್ಲಿ ಅಂತಹ ವಿಚಾರ ಏನಿದೆ? ಸಚಿವರಾದವರು ಯಾರಿಗೆ? ಎಷ್ಟು? ಲಂಚ ನೀಡಿದ್ದಾರೆ ಎಂಬ ಸಂಗತಿಗಳ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಭಾರತೀಯ ದಂಡ ಸಂಹಿತೆ (ಐಪಿಸಿ), ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವ್ಯಾಪ್ತಿಗೆ ಬರುವ ವಿಷಯಗಳ ಕುರಿತು ಶಾಸಕರು, ಆಡಳಿತ ಪಕ್ಷದ ಮುಖಂಡರೇ ಆರೋಪ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಲೋಕಾಯುಕ್ತ ಸೇರಿದಂತೆ ಸಂಬಂಧಿಸಿದ ತನಿಖಾ ಸಂಸ್ಥೆಗಳು ತಕ್ಷಣವೇ ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಬೇಕು. ಆರೋಪ ಮಾಡಿರುವವರ ಬಳಿ ಏನೆಲ್ಲಾ ಸಾಕ್ಷ್ಯಗಳಿವೆ ಎಂಬುದನ್ನು ಸಂಗ್ರಹಿಸಿ ಪರಿಶೀಲಿಸಬೇಕು. ತಪ್ಪು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

‘ಸಿ.ಡಿ ವಿಚಾರ ನಿಮಗೆ ತಿಳಿದಿದೆಯೆ? ಅದರಲ್ಲಿ ಏನಿದೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್‌, ‘ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹಿಂದಿನ ಆಪ್ತ ಸಹಾಯಕ ವಿನಯ್‌ ಎಂಬುವವರ ಅಪಹರಣದ ಪ್ರಕರಣ ನಿಮಗೆ ಗೊತ್ತಲ್ಲವೆ? ನಾವು ವಿರೋಧ ಪಕ್ಷದವರು ಏನು ಹೇಳುತ್ತೇವೆ ಎಂಬುದು ಬೇರೆ ಮಾತು. ಆಡಳಿತ ಪಕ್ಷದವರಿಗೆ ಗೊತ್ತಿರುವ ಸಂಗತಿಯ ಬಗ್ಗೆ ತನಿಖೆಯಾಗಲಿ’ ಎಂದು ಹೇಳಿದರು.

ಏಳು ಜನ್ಮವೆತ್ತಿದರೂ ಅಸಾಧ್ಯ:

‘ದೇಶವನ್ನು ಕಾಂಗ್ರೆಸ್‌ ಮುಕ್ತಗೊಳಿಸಬೇಕು’ ಎಂದು ಯಡಿಯೂರಪ್ಪ ಅವರು ಬುಧವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಹೇಳಿದ್ದಾರೆ. ಈಗ ಅಲ್ಲ, ಇನ್ನೂ ಏಳು ಜನ್ಮ ಎತ್ತಿ ಬಂದರೂ ಅವರಿಗೆ ದೇಶದಿಂದ ಕಾಂಗ್ರೆಸ್‌ ಪಕ್ಷವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ತೆರಿಗೆ ಹೆಚ್ಚಳಕ್ಕೆ ವಿರೋಧ: ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರ ಮೇಲೆ ರಾಜ್ಯ ಸರ್ಕಾರ ಆಸ್ತಿ ತೆರಿಗೆ ಹೆಚ್ಚಳದ ಭಾರ ಹೊರಿಸಲು ನಿರ್ಧರಿಸಿದೆ. ನಗರ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಹೆಚ್ಚಿಸುವ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು. ಪ್ರಸಕ್ತ ವರ್ಷ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಜ.20ಕ್ಕೆ ರಾಜಭವನ ಮುತ್ತಿಗೆ: ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜನವರಿ 20ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ಸ್ವಾತಂತ್ರ್ಯ ಉದ್ಯಾನದಿಂದ ರಾಜಭವನದವರೆಗೆ ಬೃಹತ್‌ ರ‍್ಯಾಲಿ ನಡೆಸಲಾಗುವುದು ಎಂದು ಶಿವಕುಮಾರ್‌ ಪ್ರಕಟಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಮತ್ತು ಹಿರಿಯ ಮುಖಂಡ ವಿ.ಎಸ್‌. ಉಗ್ರಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.