ADVERTISEMENT

‘ಕೈ’ ಬಲವರ್ಧನೆ: ಮುಖಂಡರ ಜೊತೆ ಡಿ.ಕೆ. ಶಿವಕುಮಾರ್ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 19:52 IST
Last Updated 13 ಜುಲೈ 2021, 19:52 IST
ಸಿಐಟಿಯು ನಾಯಕಿ ಎಸ್. ವರಲಕ್ಷ್ಮೀ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು
ಸಿಐಟಿಯು ನಾಯಕಿ ಎಸ್. ವರಲಕ್ಷ್ಮೀ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು   

ಬೆಂಗಳೂರು: ಪಕ್ಷ ಸಂಘಟನೆ, ಬಲವರ್ಧನೆ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ವಿಚಾರವಾಗಿ ಪಕ್ಷದ ಮುಖಂಡರ ಜೊತೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರ ಚರ್ಚೆ ನಡೆಸಿದರು.

ಶಾಸಕರಾದ ಅಮರೇಗೌಡ ಬಯ್ಯಾಪುರ, ಮಹಂತೇಶ ಕೌಜಲಗಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ನಿವೃತ್ತ ಐಎಎಸ್‌ ಅಧಿಕಾರಿ ಪುಟ್ಟಸ್ವಾಮಿ ಜೊತೆ ಶಿವಕುಮಾರ್‌ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದರು.

ಬಳಿಕ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎಸ್. ಪೊನ್ನಣ್ಣ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, ಅಬ್ದುಲ್ ರೆಹಮಾನ್, ಹಂಸ ಕೊಟ್ಟಮುಡಿ, ಪುಡ್ಡಿ ಗೋಣಿಕೊಪ್ಪ, ಅಶ್ರಫ್ ಕೊಟ್ಟಮುಡಿ ಅವರೊಂದಿಗೆ ಚರ್ಚಿಸಿದರು.

ADVERTISEMENT

ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಶಾಸಕ ರಘುಮೂರ್ತಿ, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಶಾಸಕ ನಂಜೇಗೌಡ, ಪರಿಷತ್‌ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಶಾಸಕರಾದ ಅಶೋಕ್ ಪಟ್ಟಣ, ಬಿ.ಆರ್‌. ಯಾವಗಲ್ ಜೊತೆಗೂ ಸಮಾಲೋಚನೆ ನಡೆಸಿದರು.

ಸಿಐಟಿಯು ನಾಯಕಿ ಎಸ್. ವರಲಕ್ಷ್ಮೀ ಕೂಡಾ ಶಿವಕುಮಾರ್‌ ಅವರನ್ನು ಭೇಟಿ ಮಾಡಿ, ‘ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಹೋರಾಟ ನಡೆಸಿದರೂ ಫಲ ಕೊಡುತ್ತಿಲ್ಲ. ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಬೇಕು’ ಎಂದು ಮನವಿ ಮಾಡಿದರು.

ಮೇಕೆದಾಟು ಯೋಜನೆ ಆರಂಭಿಸಲಿ: ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್‌, ‘ರಾಜ್ಯಕ್ಕೆ ಬಂದಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಶುಭ ಘಳಿಗೆಯಲ್ಲಿ ಮೇಕೆದಾಟು ಯೋಜನೆ ಆರಂಭಿಸಲಿ. ಏನೇ ಅಡೆತಡೆ ಇದ್ದರೂ ಅದನ್ನು ಬಗೆಹರಿಸಿ ಆದಷ್ಟು ಬೇಗ ಭೂಮಿ‌ ಪೂಜೆ ಮಾಡಲಿ’ ಎಂದು ಸಲಹೆ ನೀಡಿದರು.

ಡಿಕೆಶಿ ವ್ಯಂಗ್ಯ: ‘ಉತ್ತರಪ್ರದೇಶ ಮಾದರಿಯಲ್ಲಿ ಜನಸಂಖ್ಯೆ ‌ನಿಯಂತ್ರಣ ಕಾಯ್ದೆ ರಾಜ್ಯದಲ್ಲೂ ಜಾರಿ ಮಾಡುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ರವಿ ರಾಷ್ಟ್ರೀಯ ನಾಯಕರು. ನಾನು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ. ಅವರು ಏನು ಹೇಳಿದರೂ ನಡೆಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.