
ಬೆಂಗಳೂರು: ‘ಮತಪಟ್ಟಿಯಲ್ಲಿದ್ದ ಲೋಪಗಳ ಬಗ್ಗೆ ಡಿ.ಕೆ. ಶಿವಕುಮಾರ್ ಸರಿಯಾಗಿ ಗಮನಹರಿಸಿದ್ದರೆ, ಮತ ಕಳವು ತಪ್ಪಿಸಬಹುದಿತ್ತು. ರಾಜ್ಯದಲ್ಲಿ ಇನ್ನೂ 8 ರಿಂದ 10 ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು’ ಎಂದು ಶಾಸಕ ಕೆ.ಎನ್. ರಾಜಣ್ಣ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ರಾಹುಲ್ ಅವರಿಗೆ ನ. 17ರಂದು ರಾಜಣ್ಣ ಬರೆದಿದ್ದ ಪತ್ರ ಮಂಗಳವಾರ ಬಹಿರಂಗವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಮತ ಕಳವು ನಡೆದಿದೆ ಎಂದು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ನಾಯಕರು ಧ್ವನಿ ಎತ್ತಿದ್ದರು. ಆಗ ಸಚಿವರಾಗಿದ್ದ ರಾಜಣ್ಣ ಅದನ್ನು ಪ್ರಶ್ನಿಸಿದ್ದರು. ಇದು ಅವರ ಸಚಿವ ಸ್ಥಾನಕ್ಕೆ ಕುತ್ತು ತಂದಿತ್ತು..
ಮತ ಕಳವು ಬಗ್ಗೆ ತಾನು ನೀಡಿದ್ದ ಹೇಳಿಕೆ ಬಗ್ಗೆ ತಮ್ಮ ಪತ್ರದಲ್ಲಿ ಸ್ಪಷ್ಟನೆ ನೀಡಿರುವ ರಾಜಣ್ಣ, ಈ ಪತ್ರದ ಜೊತೆಗೆ ಮತಗಳ್ಳತನ ಬಗ್ಗೆ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಗಳ ವಿವರವನ್ನೂ ಲಗತ್ತಿಸಿದ್ದಾರೆ. ‘ನನ್ನ ಹೇಳಿಕೆಯನ್ನು ತಿರುಚಿ ತಪ್ಪಾದ ಅರ್ಥದಲ್ಲಿ ನಿಮಗೆ ವರದಿ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದೂ ರಾಹುಲ್‌ಗೆ ಮನವಿ ಮಾಡಿದ್ದಾರೆ.
ನಾಯಕತ್ವದ ವಿಚಾರದಲ್ಲಿ ನಡೆಯುತ್ತಿರುವ ಜಟಾಪಟಿಯ ಮಧ್ಯೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜಣ್ಣ ಪರಸ್ಪರ ಎರಡು ಬಾರಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಮಧ್ಯೆ, ಅವರ ಪತ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
‘ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಬಗ್ಗೆ ಕೆಲವು ಸತ್ಯಾಂಶಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಮತಗಳ್ಳತನ ವಿರೋಧಿ ಅಭಿಯಾನಕ್ಕೆ ನಾನು ಬೆಂಬಲ ವ್ಯಕ್ತಪಡಿಸಿದ್ದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಸಂಪೂರ್ಣ ಬೆಂಬಲ ಸೂಚಿಸಿದ್ದೆ. ಈ ವಿಚಾರವಾಗಿ ನಿಮ್ಮ ಹೋರಾಟ ಹಾಗೂ ನಿಮ್ಮ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸುತ್ತೇನೆ’ ಎಂದು ಪತ್ರದಲ್ಲಿ ರಾಜಣ್ಣ ತಿಳಿಸಿದ್ದಾರೆ.
‘ಕೆಪಿಸಿಸಿ ನಿಯೋಜಿಸಿದ್ದ ಬಿಎಲ್ಎಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಒತ್ತಿ ಹೇಳುವುದು ನನ್ನ ಹೇಳಿಕೆಯ ಉದ್ದೇಶವಾಗಿತ್ತು. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮತ್ತು ಸಂಬಂಧಿಸಿದವರು ಮತಪಟ್ಟಿಯಲ್ಲಿದ್ದ ಲೋಪಗಳ ಬಗ್ಗೆ ಗಮನಹರಿಸಿದ್ದರೆ ಮತಗಳ್ಳತನವನ್ನು ತಪ್ಪಿಸಬಹುದಿತ್ತು. ಇನ್ನೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬಹುದಿತ್ತು ’ ಎಂದು ಅವರು ವಿವರಿಸಿದ್ದಾರೆ.
‘ಇತರ ರಾಜ್ಯಗಳಲ್ಲಿಯೂ ಈ ರೀತಿಯ ಲೋಪಗಳನ್ನು ತಪ್ಪಿಸಿದ್ದರೆ, 30-40 ಸ್ಥಾನಗಳನ್ನು ಹೆಚ್ಚಿಗೆ ಗೆಲ್ಲಬಹುದಿತ್ತು. ಆಗ ನರೇಂದ್ರ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುತ್ತಿತ್ತು. ರಾಹುಲ್ ಗಾಂಧಿ ಪ್ರಧಾನಿ ಆಗುತ್ತಿದ್ದರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೆ’ ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.
Cut-off box - ‘ಸಿದ್ದರಾಮಯ್ಯ ನಾಯಕತ್ವದಿಂದ ಕಾಂಗ್ರೆಸ್‌ಗೆ ಅಧಿಕಾರ’ ‘ನಾನು ನೆಹರೂ ಕುಟುಂಬದ ನಿಷ್ಠಾವಂತ ಅಭಿಮಾನಿ. ಕರ್ನಾಟಕದಲ್ಲಿ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರ ನಾಯಕತ್ವದಲ್ಲಿ ಭೂ ಸುಧಾರಣೆಯ ಐತಿಹಾಸಿಕ ಕಾಯ್ದೆಯನ್ನು ಅನುಷ್ಠಾನ ಮಾಡಲಾಗಿತ್ತು. ಆ ವೇಳೆ ನಾನು ಭೂ ನ್ಯಾಯಮಂಡಳಿಯ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ್ದೆ. ಇತ್ತೀಚಿನ ದಿನಗಳಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ 2013 ಮತ್ತು 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ದಣಿವರಿಯದೇ ಬಡವರು ದುರ್ಬಲರು ಎಸ್ಸಿ ಎಸ್ಟಿ ಒಬಿಸಿ ಅಲ್ಪಸಂಖ್ಯಾತ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ’ ಎಂದು ರಾಜಣ್ಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿ.ಎಂ– ರಾಜಣ್ಣ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿ ಮಂಗಳವಾರ ರಾತ್ರಿ ಭೇಟಿ ಮಾಡಿದ ಕೆ.ಎನ್. ರಾಜಣ್ಣ ಮಾತುಕತೆ ನಡೆಸಿದರು. ಶಿವಕುಮಾರ್ ಜೊತೆ ಸತತ ಎರಡು ದಿನ ಸಮಾಲೋಚನೆ ನಡೆಸಿದ್ದ ರಾಜಣ್ಣ ದಿಢೀರ್ ಆಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿಗೆ ನ. 17ರಂದು ಬರೆದಿದ್ದ ಪತ್ರದ ಬಗ್ಗೆ ಮತ್ತು ಶಿವಕುಮಾರ್ ಅವರೊಂದಿಗೆ ನಡೆಸಿದ ವಿಚಾರವಿನಿಮಯದ ಕುರಿತು ಸಿದ್ದರಾಮಯ್ಯ ಅವರಿಗೆ ರಾಜಣ್ಣ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.