ADVERTISEMENT

ಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲ: ಡಿ.ಕೆ. ಶಿವಕುಮಾರ್

ಶಾಸಕರು ಜೊತೆಗಿಲ್ಲ ಎಂಬ ಪ್ರತಿಪಾದನೆಗೆ ಪರೋಕ್ಷ ಉತ್ತರ ನೀಡಿದ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 16:16 IST
Last Updated 2 ಫೆಬ್ರುವರಿ 2026, 16:16 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. ಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲ ಎಂಬುದನ್ನು ನಾನು ನಂಬಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವ ನಡುವೆಯೇ,  ಅವರ ಈ ಮಾತು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ADVERTISEMENT

ವಂದನಾ ನಿರ್ಣಯದ ಚರ್ಚೆಗೆ ಸೋಮವಾರ ಉತ್ತರ ನೀಡುತ್ತಿರುವ ಮಧ್ಯೆ ಅಧಿಕಾರ ಹಂಚಿಕೆಯ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ,  ಪಕ್ಕದ ಆಸನದಲ್ಲಿ ಕುಳಿತಿದ್ದ ಡಿ.ಕೆ. ಶಿವಕುಮಾರ್‌ ಕಡೆಗೆ ನೋಡಿ, ‘ಸಿಎಂಗೂ ಡಿ.ಕೆ. ಶಿವಕುಮಾರ್‌ಗೂ ಜಗಳವಿದೆ ಅಂತಿದ್ದಾರೆ. ನೋಡಪ್ಪ ನೀನು ಹಾಲಂತೆ, ನಾನು ಸಕ್ಕರೆಯಂತೆ. ನಿನಗೂ ನನಗೂ ಹಾಲಾಹಲ ಅಂತಲೂ ಹೇಳ್ತಾರೆ’ ಎಂದರು.

ಕುಳಿತಲ್ಲಿಂದಲೇ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ಸಮಯವೇ ಉತ್ತರ ಕೊಡುತ್ತದೆ ಬಿಡಿ’ ಎಂದರು.‌

ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಕರೆಕ್ಟ್. ಒಂದು ಮಾತು ನೂರು ಅರ್ಥ. ಇದು ಡಿಕೆಶಿ ಸ್ಟೈಲ್. ಸಮಯ ಉತ್ತರ ಕೊಡುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ. ಆ ಸಮಯ ಯಾವಾಗ ಬರುತ್ತದೆ’ ಎಂದರು.

‘ಸಿದ್ದರಾಮಯ್ಯ ಅವರು ಶೇ 100ರಷ್ಟು ನನ್ನ ಜತೆಗಿದ್ದಾರೆ. ನಾವಿಬ್ಬರೂ ಪರಸ್ಪರ ಕೈಜೋಡಿಸಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ. ಜನಕ್ಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ಅವರ (ಸಿದ್ದರಾಮಯ್ಯ) ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರೂ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ’ ಎಂದರು.

‘ನಿಮ್ಮ ಟ್ವೀಟ್ ಅರ್ಥವೇನು’ ಎಂದು ಅಶೋಕ ಮತ್ತೆ ಕೇಳಿದಾಗ, ‘ನೀವು ಟ್ವೀಟ್ ಅನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ’ ಎಂದು ಹೇಳಿದರು.

‘ನೀವು ಯಾವ ವಿಚಾರಕ್ಕೆ ತಾಳ್ಮೆ ಬಗ್ಗೆ ಮಾತನಾಡಿದ್ದೀರಿ’ ಎಂದು ಅಶೋಕ ಪ್ರಶ್ನಿಸಿದರು.  ‘ಯಾರ‍್ಯಾರೊ ಮಾತನಾಡುವುದಕ್ಕೆ ನಾನು ಉತ್ತರ ನೀಡಲಾಗದು. ನಮ್ಮ ಪಕ್ಷ ಹಾಗೂ ನಿಮ್ಮ ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಮುಖ್ಯಮಂತ್ರಿ ಬದಲಾದರು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ. ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ’ ಎಂದು ಸೂಚ್ಯವಾಗಿ ಹೇಳಿದರು.

ಲಾಡ್–ಅಶೋಕ ವಾಗ್ವಾದ: ಶಿವಕುಮಾರ್‌ಗೆ ಯಾವಾಗ ಸಮಯ ಬರುತ್ತದೆ ಎಂದು ಅಶೋಕ ಪ್ರಶ್ನಿಸಿದಾಗ, ಮಾತನಾಡಲು ಸಚಿವ ಸಂತೋಷ್ ಲಾಡ್​​ ಮುಂದಾದರು. ಆಗ ಪ್ರತಿಕ್ರಿಯಿಸಿದ ಅಶೋಕ, ‘ಯಾರೊ ನನಗೆ ಹೇಳಿದ್ದು, ಶಿವಕುಮಾರ್ ಕಡೆ 56 ಶಾಸಕರು ಇದ್ದಾರೆ ಅಂತೆ. ಆದ್ರೆ ಸಂತೋಷ್ ಲಾಡ್ ಅಂಥವರು ಬೆಳಿಗ್ಗೆ ಅಲ್ಲಿ, ರಾತ್ರಿ ಇಲ್ಲಿ ಇರ್ತಾರೆ. ಅದಕ್ಕೆ ಶಿವಕುಮಾರ್‌ಗೆ ಲಾಡ್ ಅಂಥವರನ್ನು ನೋಡಿ, ಯಾರು ಯಾರ ಕಡೆ ಇದ್ದಾರೆಂದು ಗೊಂದಲ ಆಗಿದೆಯಂತೆ‌’ ಎಂದು ಲಾಡ್ ಅವರ ಕಾಲೆಳೆದರು.

ಅಶೋಕ ಮಾತಿಗೆ ಕೆರಳಿದ ಲಾಡ್, ‘ಬೆಳಿಗ್ಗೆ ಹೋಗುವ, ಸಂಜೆ ಹೋಗುವ ಅಗತ್ಯ ನನಗೆ ಇಲ್ಲ. ನೀವು ಶಾಸಕರನ್ನು ಖರೀದಿಸಲು ಹೋಗಿದ್ದವರು. ಅವರ ಕಾಲಿಗೆ ಬಿದ್ದು ಖರೀದಿ ಮಾಡಿದವರು. ನೀವು ಈ ಥರ ಮಾತು ಆಡಬಾರದು’ ಎಂದರು.

ಸ್ಪಷ್ಟನೆ ನೀಡಿದ ಡಿ.ಕೆ. ಶಿವಕುಮಾರ್, ‘ಅಶೋಕ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಿಂದ ಬೆಳೆದು ಬಂದವನು. ನನ್ನದೇ ಆದ ಮೌಲ್ಯಗಳನ್ನು ಪಾಲಿಸಿಕೊಂಡು, ಉಳಿಸಿಕೊಂಡು ಬಂದಿದ್ದೇನೆ. ರಾಜಕೀಯದಲ್ಲಿ ನಾನು ಎಂತೆಂಥವರ ಏಳುಬೀಳು ನೋಡಿದ್ದೇನೆ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ಒಂದು ತಿಂಗಳು ಕಳೆದರೆ ನಾನು ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.