ಡಿಕೆಶಿ
ನವದೆಹಲಿ: ಪಕ್ಷದ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರನ್ನು ಮಂಗಳವಾರ ಭೇಟಿಯಾದ ಬಳಿಕ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
‘ಯಾವುದೇ ಹುದ್ದೆಯಲ್ಲಿ ಇದ್ದರೂ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ’ ಎಂದು ಬೆಂಗಳೂರಿನಲ್ಲಿ ಸೋಮವಾರ ಅವರು ಹೇಳಿದ್ದರು. ಕೆ.ಸಿ.ವೇಣುಗೋಪಾಲ್ ಅವರ ಜೊತೆಗೆ ಶಿವಕುಮಾರ್ ಮುಕ್ಕಾಲು ಗಂಟೆ ಚರ್ಚಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವರು ನೀಡುತ್ತಿರುವ ಹೇಳಿಕೆಗಳಿಗೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಗೊಂದಲ ಸೃಷ್ಟಿಸುವ ಇಂತಹ ಹೇಳಿಕೆಗಳಿಗೆ ಹೈಕಮಾಂಡ್ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮುಂದಿನ ತಿಂಗಳು ನಡೆಯಲಿರುವ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಹೊಸ ಕಾಂಗ್ರೆಸ್ ಭವನದ ಶಿಲಾನ್ಯಾಸ ಸಮಾರಂಭಕ್ಕೆ ಆಹ್ವಾನಿಸಿದರು. ರಾಜ್ಯದಾದ್ಯಂತ 100 ಸ್ಥಳಗಳಲ್ಲಿ ಪಕ್ಷದ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ವೇಣುಗೋಪಾಲ್ ಗಮನಕ್ಕೆ ತಂದರು.
‘ಪಕ್ಷ ಬಲಪಡಿಸುವ ಯೋಜನೆಗಳನ್ನು ಪೂರ್ಣಗೊಳಿಸಲು ನಾಯಕರ ಸಹಕಾರ ಬೇಕು. ಆದರೆ, ಕೆಲವು ಸಚಿವರು ಅನಗತ್ಯ ಹೇಳಿಕೆ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಇದರಿಂದ ಸಂಘಟನೆ ಮೇಲೆ ಹೊಡೆತ ಬೀಳುತ್ತಿದೆ’ ಎಂದು ಅವರು ದೂರಿದರು ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಪಕ್ಷಕ್ಕೆ ಶಕ್ತಿ ಬಂದಿದ್ದೇ ನಾನು ಅಧ್ಯಕ್ಷನಾದ ಬಳಿಕ. ಪಕ್ಷವನ್ನು ಬಲಪಡಿಸುವ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ.–ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಹೇಳಿಕೆಗಳನ್ನು ನೀಡದಂತೆ ಸಚಿವರಿಗೆ ಈಗಾಗಲೇ ತಾಕೀತು ಮಾಡಲಾಗಿದೆ ಎಂದು ವೇಣುಗೋಪಾಲ್ ತಿಳಿಸಿದರು ಎಂದು ಗೊತ್ತಾಗಿದೆ.
‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಅದಕ್ಕಾಗಿ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಕೆಲವು ಪದಾಧಿಕಾರಿಗಳನ್ನು ಬದಲಾಯಿಸುವುದಾಗಿ ಅವರು ಪಕ್ಷದ ಉನ್ನತ ನಾಯಕರಲ್ಲಿ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.
‘ಬಜೆಟ್ ಅಧಿವೇಶನ ಮುಗಿದ ಬಳಿಕ ಸಚಿವರು ಜಿಲ್ಲಾ ಪ್ರವಾಸ ಮಾಡಬೇಕು. ಪಕ್ಷದ ಕಚೇರಿಗೆ ಭೇಟಿ ನೀಡಬೇಕು. ಜಿಲ್ಲೆಗಳಲ್ಲಿ ಕಾರ್ಯಕರ್ತರ ಕಷ್ಟ ಆಲಿಸಬೇಕು. ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.