ADVERTISEMENT

ಮುಸ್ಲಿಂ ಧರ್ಮಗುರು ಭೇಟಿ ಮಾಡಿದ ಡಿಕೆಶಿ: ಕೊರೊನಾ ಮುಕ್ತಿಗೆ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 10:08 IST
Last Updated 8 ಜುಲೈ 2020, 10:08 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಬುಧವಾರ ಬೆಂಗಳೂರಿನ ನಾಗವಾರದಲ್ಲಿರುವ ಅರೇಬಿಕ್ ಕಾಲೇಜ್‌ನಲ್ಲಿ ಮುಸ್ಲಿಂ ಧರ್ಮಗುರು ಕರ್ನಾಟಕದ ಅಮಿರ್-ಇ-ಷರಿಯತ್, ಮುಫ್ತಿ ಸಗೀರ್ ಅಹಮದ್ ಅವರನ್ನು ಭೇಟಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಬುಧವಾರ ಬೆಂಗಳೂರಿನ ನಾಗವಾರದಲ್ಲಿರುವ ಅರೇಬಿಕ್ ಕಾಲೇಜ್‌ನಲ್ಲಿ ಮುಸ್ಲಿಂ ಧರ್ಮಗುರು ಕರ್ನಾಟಕದ ಅಮಿರ್-ಇ-ಷರಿಯತ್, ಮುಫ್ತಿ ಸಗೀರ್ ಅಹಮದ್ ಅವರನ್ನು ಭೇಟಿ ಮಾಡಿದರು.   

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಬೆಂಗಳೂರಿನ ನಾಗವಾರದಲ್ಲಿರುವ ಅರೇಬಿಕ್ ಕಾಲೇಜ್‌ನಲ್ಲಿ ಬುಧವಾರಮುಸ್ಲಿಂ ಧರ್ಮಗುರು ಕರ್ನಾಟಕದ ಅಮಿರ್-ಇ-ಷರಿಯತ್, ಮುಫ್ತಿ ಸಗೀರ್ ಅಹಮದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬೆಂಗಳೂರು ಸೇರಿದಂತೆ ರಾಜ್ಯ, ದೇಶ ಹಾಗೂ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾದಿಂದ ಮುಕ್ತಿ ನೀಡುವಂತೆ ಧರ್ಮಗುರುಗಳು ಅಲ್ಲಾಹುವನ್ನು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ‘ಅರೇಬಿಕ್ ವಿದ್ಯಾ ಸಂಸ್ಥೆ ಧರ್ಮ ಹಾಗೂ ಶಾಂತಿಯನ್ನು ಕಾಪಾಡಲು ಇರುವ ಪವಿತ್ರ ಸಂಸ್ಥೆ. ಈ ಧರ್ಮ ಪೀಠದ ಪ್ರಮುಖರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ನಾನು ಎಲ್ಲ ಧರ್ಮಗಳನ್ನು ನಂಬಿ ಗೌರವಿಸುತ್ತಾ ಬಂದಿದ್ದೇನೆ. ಜಾತ್ಯಾತೀತ ತತ್ವಕ್ಕೆ ಒತ್ತು ಕೊಟ್ಟಿದ್ದೇನೆ. ಎಲ್ಲ ಧರ್ಮಗುರುಗಳ, ಗುರುಹಿರಿಯರ ಆಶೀರ್ವಾದ ಪಡೆದಿದ್ದು, ಬಹಳ ಸಂತೋಷವಾಗಿದೆ’ಎಂದರು.

ADVERTISEMENT

‘ಪ್ರಾರ್ಥನೆ ವೇಳೆ ಇಡೀ ಮಾನವ ಕುಲದ ರಕ್ಷಣೆಗೆ ಪ್ರಾರ್ಥಿಸಲಾಗಿದೆ. ಇದು ಧರ್ಮದ ವಿಚಾರವಲ್ಲ. ಮಾನವಕುಲದ ಒಳಿತಿನ ವಿಚಾರ. ಎಲ್ಲ ಧರ್ಮದ ಉತ್ತಮ ವಿಚಾರ, ಭಾವನೆಗಳ ಜತೆ ನಾವು ನಿಲ್ಲುತ್ತೇವೆ’ಎಂದು ಹೇಳಿದರು.

‘ಕೊರೊನಾ ಸೋಂಕು ಹರಡುವಿಕೆ ಸಂಬಂಧ ರಾಜಕೀಯ ಉದ್ದೇಶದಿಂದ ಒಂದು ಕೋಮಿನ ವಿರುದ್ಧ ಆರೋಪ ಮಾಡಲಾಯಿತು. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಎಲ್ಲರ ಹಿತ ಕಾಯಲು ಬದ್ಧವಾಗಿದೆ. ಸಮಾಜದ ಎಲ್ಲಾ ವರ್ಗದವರನ್ನು ಒಂದೇ ರೀತಿ ಕಾಣಬೇಕು. ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.