
ನವದೆಹಲಿ: ‘ಅಧಿಕಾರ ಹಂಚಿಕೆ ಸೂತ್ರ’ದಂತೆ ಕರ್ನಾಟಕ ಸರ್ಕಾರದ ನಾಯಕತ್ವಕ್ಕಾಗಿ ತಾಳ್ಮೆಯಿಂದ ಕಾಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ವರಿಷ್ಠ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗುರುವಾರ ಇಲ್ಲಿ ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಿದರು.
ಅಸ್ಸಾಂ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ಹೆಣೆಯಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಶಿವಕುಮಾರ್ ಭಾಗಿಯಾದರು. ಈ ವೇಳೆ, ರಾಹುಲ್ ಹಾಗೂ ಪ್ರಿಯಾಂಕಾ ಅವರೊಂದಿಗೆ ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಸ್ತಾಂತರ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದರು. ‘ಶೀಘ್ರದಲ್ಲೇ ಇಬ್ಬರಿಗೂ (ಸಿದ್ದರಾಮಯ್ಯ ಹಾಗೂ ಶಿವಕುಮಾರ್) ಬುಲಾವ್ ನೀಡಿ ಗೊಂದಲ ನಿವಾರಿಸುತ್ತೇವೆ’ ಎಂದು ರಾಹುಲ್ ಅಭಯ ನೀಡಿದರು ಎಂದು ಮೂಲಗಳು ತಿಳಿಸಿವೆ.
ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯ ನಾಯಕರು ಭೇಟಿಯ ಚಿತ್ರವನ್ನು ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ, ಗುರುವಾರ ನಡೆದ ಉಭಯ ನಾಯಕರ ಭೇಟಿಯ ಚಿತ್ರವನ್ನು ಶಿವಕುಮಾರ್ ತಂಡ ಅಥವಾ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿಲ್ಲ.
ಕೇಂದ್ರ ಬಜೆಟ್ ಅಧಿವೇಶನದ ಮೊದಲ ಹಂತ ಶುಕ್ರವಾರ ಮುಗಿಯಲಿದೆ. ಎರಡನೇ ಹಂತದ ಅಧಿವೇಶನ ಮಾರ್ಚ್ 9 ರಿಂದ ನಡೆಯಲಿದೆ. ರಾಜ್ಯ ಬಜೆಟ್ ಅಧಿವೇಶನ ಮಾರ್ಚ್ ಮೊದಲ ವಾರದಲ್ಲಿ ಶುರುವಾಗುವ ನಿರೀಕ್ಷೆ ಇದೆ. ಹೀಗಾಗಿ, ಈ ತಿಂಗಳಲ್ಲೇ ಇಬ್ಬರು ನಾಯಕರ ಜತೆಗೆ ವರಿಷ್ಠರು ಚರ್ಚೆ ನಡೆಸಿ ಬಿಕ್ಕಟ್ಟು ಬಗೆಹರಿಸಬಹುದು ಎಂದು ಶಿವಕುಮಾರ್ ಬಣ ವಿಶ್ವಾಸ ವ್ಯಕ್ತಪಡಿಸಿದೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಸಂಘರ್ಷ ಏರ್ಪಟ್ಟಿತ್ತು. ಅಲ್ಲೂ ಅಧಿಕಾರ ಹಸ್ತಾಂತರದ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಹೈಕಮಾಂಡ್ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದೇ ಯಥಾಸ್ಥಿತಿಯನ್ನು ಮುಂದುವರಿಸಿತ್ತು. ‘ರಾಜ್ಯದಲ್ಲಿ ಕಾಂಗ್ರೆಸ್ ಬೇರುಗಳು ಬಲವಾಗಿವೆ. ಇತರ ರಾಜ್ಯಗಳಂತೆ ಕರ್ನಾಟಕದ ವಿಷಯದಲ್ಲಿ ಹೈಕಮಾಂಡ್ ನಿರ್ಲಕ್ಷ್ಯ ವಹಿಸುವುದಿಲ್ಲ. ಶೀಘ್ರದಲ್ಲೇ ನಾಯಕತ್ವದ ಬ್ಯಾಟನ್ ಹಸ್ತಾಂತರವಾಗುವ ಸುಳಿವು ಸಿಕ್ಕಿದೆ’ ಎಂದು ಬಣದ ನಾಯಕರು ವಾದ ಮಂಡಿಸಿದ್ದಾರೆ.
ಸೋನಿಯಾ ನಿವಾಸದಿಂದ ಹೊರಬಂದ ಬಳಿಕ ಹಸನ್ಮುಖರಾಗಿದ್ದ ಶಿವಕುಮಾರ್, ‘ನಾನು ದೆಹಲಿಯ ಗಾಳಿ ಸೇವಿಸಲು ಇಲ್ಲಿಗೆ ಬಂದಿಲ್ಲ. ರಾಜಕಾರಣ ಮಾಡಲೆಂದೇ ಬಂದಿದ್ದೇನೆ’ ಎಂದು ಹೇಳಿಕೊಂಡರು. ಆ ನಂತರ, ಕರ್ನಾಟಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಲ್ಲಸಿತರಾಗಿಯೇ ಉತ್ತರ ನೀಡಿದರು.
ನವದೆಹಲಿಗೆ ಬರುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ್ದ ಶಿವಕುಮಾರ್, ‘ನಾನು ಮತ್ತು ಸಿದ್ದರಾಮಯ್ಯ ಅವರು ಕದ್ದು ಮುಚ್ಚಿ ಮಾತನಾಡಿಲ್ಲ. ನಮ್ಮ ಪಕ್ಷದ ವರಿಷ್ಠರು ಸೇರಿಕೊಂಡೇ ಮಾತನಾಡಿದ್ದೆವು’ ಎಂದು ಹೇಳಿಕೆ ನೀಡಿದ್ದರು. ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಕೆಶಿ ಭಾಗಿಯಾಗಿದ್ದರು. ರಾಹುಲ್ ಅವರನ್ನು ಭೇಟಿ ಮಾಡಿ ತಮ್ಮ ಮನದಿಂಗಿತ ಹೇಳಿಕೊಳ್ಳಲು ಬುಧವಾರವಿಡೀ ಪ್ರಯತ್ನಿಸಿದ್ದರು. ದಿನವಿಡೀ ಒತ್ತಡದಲ್ಲೇ ಇದ್ದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ರಾತ್ರಿ 8ರ ನಂತರ ಭೇಟಿ ಮಾಡಿ ಚರ್ಚಿಸಿದ್ದರು. ರಾಹುಲ್ ಹಾಗೂ ಪ್ರಿಯಾಂಕಾ ಭೇಟಿಯ ಬಳಿಕ ಅವರ ಲಹರಿ ಬದಲಾಯಿತು.
ಯಶಸ್ಸಿಗೆ ಸ್ವಲ್ಪ ಶ್ರಮ ಬೇಕಾಗುತ್ತದೆ: ಡಿಕೆಶಿ
‘ನಾವು ರಾಜಕಾರಣದಲ್ಲಿದ್ದೇವೆ, ರಾಜಕಾರಣ ಮಾಡಲೇಬೇಕು. ನನಗೆ ಸದಾ ಯಶಸ್ಸು ಸಿಗುತ್ತದೆ. ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ’ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
‘ಅಧಿಕಾರ ಹಂಚಿಕೆ ವಿಷಯವಾಗಿ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿಲ್ಲ. ಪಕ್ಷ ತನ್ನದೇ ಆದ ಗುರಿ ಹೊಂದಿದ್ದು, ಪಕ್ಷದ ಯಶಸ್ಸು ಹಾಗೂ ಪಕ್ಷದ ಹಿತಾಸಕ್ತಿ, ಕರ್ನಾಟಕ ಹಾಗೂ ದೇಶದ ಹಿತದೃಷ್ಟಿ ಆಧಾರದ ಮೇಲೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತಾರೆ. ಮಾಧ್ಯಮಗಳು ಹಾಗೂ ಬೇರೆಯವರು ಈ ಭೇಟಿಗೆ ಹೊಸ ರೂಪ, ಬೇರೆ ಬಣ್ಣ ನೀಡುತ್ತಿದ್ದೀರಿ. ನಮಗೆ ಈ ಭೇಟಿಯಲ್ಲಿ ವಿಶೇಷವೇನಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ನಾನು ದೆಹಲಿಗೆ ಬಂದ ಸಂದರ್ಭದಲ್ಲಿ ಎಲ್ಲರನ್ನೂ ಭೇಟಿ ಮಾಡುತ್ತೇನೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಟಿ.ಬಿ. ಜಯಚಂದ್ರ ಸೇರಿದಂತೆ ಎಲ್ಲರನ್ನು ಭೇಟಿ ಮಾಡಿರುವೆ. ರಾಜಕಾರಣಿಗಳು ಭೇಟಿಯಾದಾಗ ರಾಜಕಾರಣ ಚರ್ಚೆ ಮಾಡದೇ ಇರುತ್ತಾರಾ? ರಾಜಕೀಯ ಚರ್ಚೆ ಮಾಡುತ್ತೇವೆ. ಆದರೆ, ಆ ಚರ್ಚೆಯ ವಿವರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಾರೆ. ಕರ್ನಾಟಕದ ಹಿತ ಸೇರಿದಂತೆ ಅಸ್ಸಾಂ ಹಾಗೂ ದೆಹಲಿಯ ವಿಷಯಗಳ ಬಗ್ಗೆ ಚರ್ಚೆ ಮಾಡಿರುತ್ತೇವೆ’ ಎಂದಷ್ಟೇ ತಿಳಿಸಿದರು.
ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ಶಾಸಕರುಂಟು ಹಾಗೂ ಮುಖ್ಯಮಂತ್ರಿಗಳುಂಟು. ಅವರಿಗೆ ಮುಖ್ಯಮಂತ್ರಿಯವರು ಯಾವ ಮಾರ್ಗದರ್ಶನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಈ ವಿಚಾರ ನನ್ನ ಜತೆ ಚರ್ಚೆಯಾಗಿಲ್ಲ. ಮಾಧ್ಯಮಗಳಿಂದಲೇ ಪ‍್ರವಾಸದ ವಿಷಯ ಗೊತ್ತಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.