ADVERTISEMENT

ಮುಂದೆಯೂ ನನ್ನ ಬಗ್ಗೆ ಪಕ್ಷದವರು ತೀರ್ಮಾನ ಮಾಡುತ್ತಾರೆ: ಡಿಕೆಶಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 15:52 IST
Last Updated 11 ಜನವರಿ 2026, 15:52 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: ‘ರಾಜಕೀಯ ಕುಟುಂಬದ ಹಿನ್ನೆಲೆ ಇರದಿದ್ದರೂ ಈ ಮಟ್ಟಕ್ಕೆ ಬೆಳೆದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಪಕ್ಷದವರು ತೀರ್ಮಾನ ಮಾಡುತ್ತಾರೆ ಎಂಬ ನಂಬಿಕೆ, ಆತ್ಮ ವಿಶ್ವಾಸ ಇದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಇಲ್ಲಿನ ಅರಮನೆ ಮೈದಾನದಲ್ಲಿ ನಡೆದ ‘ಫಸ್ಟ್‌ ಸರ್ಕಲ್‌ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ’ದಲ್ಲಿ ಉದ್ಯಮಿಗಳ ಯಶಸ್ಸಿನ ಕುರಿತು ಮಾತನಾಡುವಾಗ ಪ್ರಾಸಂಗಿಕವಾಗಿ ರಾಜಕೀಯವನ್ನೂ ಪ್ರಸ್ತಾಪಿಸಿದರು.

ADVERTISEMENT

‘ನಿಮಗೆ ಯಾರಾದರೂ ತೊಂದರೆ ಕೊಡುವವರು, ಮೋಸ ಮಾಡುವವರು ಇದ್ದರೆ, ಅವರು ನಿಮ್ಮ ಅಕ್ಕಪಕ್ಕದಲ್ಲಿ ಇರುವವರೇ ಆಗಿರುತ್ತಾರೆ. ಬೇರೆಯವರು ತೊಂದರೆ ಕೊಡಲ್ಲ. ನೀವು ಜಾಗರೂಕರಾಗಿ ಇರಬೇಕು’ ಎಂದು ಎಚ್ಚರಿಸಿದರು.

‘ಅಧಿವೇಶನದಲ್ಲಿ ಒಮ್ಮೆ ಯಡಿಯೂರಪ್ಪ ಅವರಿಗೆ ಯಶಸ್ಸಿನ ಬಗ್ಗೆ ಒಂದು ಮಾತು ಹೇಳಿದ್ದೆ. ನಾವು ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ನಮ್ಮಲ್ಲಿ ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕು. ಆಗ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದ್ದೆ’ ಎಂದರು.

‘ನಾನು ರಾಜಕೀಯವಾಗಿ ಅನೇಕ ಏಟು ತಿಂದಿದ್ದೇನೆ. ರಾಜಕೀಯ ಮಾಡಿ ಜೈಲಿಗೂ ಹಾಕಿಸಿದ್ದರು. ಪಕ್ಷಾತೀತವಾಗಿ, ಸಮುದಾಯತೀತವಾಗಿ ಜನ ನನಗೆ ಒಳ್ಳೆಯದು ಬಯಸುತ್ತಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ’ ಎಂದು ಹೇಳಿದರು.

‘ಬೇರೆಯವರಿಗಿಂತ ನಮ್ಮ ಸಮುದಾಯದ ಕೆಲವರು ಅಸೂಯೆಯಿಂದ ಟೀಕೆ ಮಾಡುತ್ತಿದ್ದಾರೆ. ಹಿಂದೆ, ಮುಂದೆ ಚಾಕು ಹಾಕುತ್ತಿದ್ದಾರೆ. ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುತ್ತಾರೆ. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಾನು ಅವರ ಜತೆ ಎಷ್ಟು ಪ್ರಾಮಾಣಿಕವಾಗಿ ಇದ್ದೆ ಎಂಬುದು ಆತ್ಮಸಾಕ್ಷಿಗೆ ಗೊತ್ತು. ಆದರೂ ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.