ADVERTISEMENT

ಸಿ.ಎಂ ಬದಲಾವಣೆ ವಿಚಾರದ ಬಗ್ಗೆ ಮಹದೇವಪ್ಪಗೆ ಮಾಹಿತಿಯಿದೆ: ಡಿಕೆಶಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 15:42 IST
Last Updated 24 ಫೆಬ್ರುವರಿ 2026, 15:42 IST
   

ಬೆಂಗಳೂರು: ‘ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವ ಎಚ್‌.ಸಿ. ಮಹದೇವಪ್ಪ ಅವರೇ ಹೈಕಮಾಂಡ್‌ ಆಗಿರುವುದರಿಂದ ಅವರಿಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಹೀಗಾಗಿ, ದಲಿತ ಮುಖ್ಯಮಂತ್ರಿ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ’ ಎಂದು ಕೆಣಕಿದರು.

‘ಹೈಕಮಾಂಡ್  ನಾಯಕರು ನಿಮ್ಮನ್ನು ಮತ್ತು ಮುಖ್ಯಮಂತ್ರಿ ಅವರನ್ನು ದೆಹಲಿಗೆ ಆಹ್ವಾನಿಸಿದ್ದಾರೆಯೇ’ ಎಂಬ ಪ್ರಶ್ನೆಗೆ, ‘ನನಗೆ ಯಾವುದೇ ಕರೆ ಬಂದಿಲ್ಲ. ಆದರೆ, ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ನಾನು ದೆಹಲಿಗೆ ಹೋಗಬೇಕಾಗಿದೆ’ ಎಂದರು.

ADVERTISEMENT

‘ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ’ ಎಂ‌ದಾಗ, ‘ಸಚಿವರು ಮತ್ತು ಶಾಸಕರನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿ. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ’ ಎಂ‌ದರು.

‘ಸತೀಶ ಜಾರಕಿಹೊಳಿ ಅವರು ನಿಮ್ಮ ಜತೆ ಚರ್ಚೆ ಮಾಡಿದ್ದಾರಾ’ ಎಂಬ ಪ್ರಶ್ನೆಗೆ, ‘ಜಾರಕಿಹೊಳಿ ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾವು ಸಮಾನ ಮನಸ್ಕರು. ‌ವಾರಕ್ಕೊಮ್ಮೆ ಮಾತನಾಡುತ್ತಿರುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲ ಯೋಜನೆ ರೂಪಿಸುತ್ತಿದ್ದೇವೆ’ ಎಂದರು.

‘ಮೊದಲ ಬಾರಿಗೆ ಆಯ್ಕೆಯಾದ ಶಾಸಕರಲ್ಲಿ ಕನಿಷ್ಠ ಐವರಿಗೆ ಮಂತ್ರಿ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿ ಹೈಕಮಾಂಡ್‌ಗೆ 31 ಶಾಸಕರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ‘ನನಗೆ ಆ ಪತ್ರ ತಲುಪಿಲ್ಲ. ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ಮೋದಿ ಅವರು ಶಾಸಕರಾಗದೇ ಮುಖ್ಯಮಂತ್ರಿ ಆಗಲಿಲ್ಲವೇ. ಶಾಸಕರು ಕೇಳುವುದರಲ್ಲಿ ತಪ್ಪೇನೂ ಇಲ್ಲ’ ಎಂದರು.

‘ಮೊದಲ ಬಾರಿಗೆ ಶಾಸಕರಾದಾಗ ಮಂತ್ರಿಯಾದವರಲ್ಲಿ ನಾನೂ ಒಬ್ಬ. ಹೊಸ ಪೀಳಿಗೆ ಬೆಳೆಯಬೇಕು. ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕುಳಿತುಕೊಳ್ಳಲು ಸಾಧ್ಯ? ಹೊಸಬರು ಸಂಪುಟಕ್ಕೆ ಬರಬೇಕು ಎಂದು ಬೆಂಬಲಿಸುವವರಲ್ಲಿ ನಾನೂ ಇದ್ದೇನೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.