ADVERTISEMENT

ವಿಧಾನಸಭೆಯಲ್ಲಿ ‘ನಮಸ್ತೆ ಸದಾ ವತ್ಸಲೆ…’: RSS ಗೀತೆ ಹಾಡಿದ ಡಿ.ಕೆ ಶಿವಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2025, 6:50 IST
Last Updated 22 ಆಗಸ್ಟ್ 2025, 6:50 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಚರ್ಚೆ ನಡೆಯುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ’ ಎನ್ನುವ ಆರ್‌ಎಸ್‌ಎಸ್‌ ಗೀತೆಯ ಕೆಲವು ಸಾಲುಗಳನ್ನು ಹಾಡಿದ್ದಾರೆ.

ಕಾಲ್ತುಳಿತ ಸಂಬಂಧ ಸದನಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರು ಉತ್ತರ ನೀಡುತ್ತಿದ್ದರು. ಘಟನೆಗೆ ಡಿ.ಕೆ ಶಿವಕಮಾರ್ ಅವರೇ ಕಾರಣ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು. ಅವರು, ಏರ್‌ಪೋರ್ಟ್‌ಗೆ ಹೋಗಿದ್ದನ್ನು, ಕನ್ನಡ ಬಾವುಟ ಹಿಡಿದ್ದನ್ನು ಉಲ್ಲೇಖಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್, ‘ನಾನು ಕೆಎಸ್‌ಸಿಎ ಸದಸ್ಯ. ಕೆಎಸ್‌ಸಿಎ ಕಾರ್ಯದರ್ಶಿ ನನ್ನ ಬಾಲ್ಯ ಸ್ನೇಹಿತ. ನಾನು ಬೆಂಗಳೂರು ಉಸ್ತುವಾರಿ ಸಚಿವ. ನಾನು ಅಂದು ಏರ್‌ಪೋರ್ಟ್‌ಗೆ ಹೋಗಿದ್ದೆ, ಕನ್ನಡ ಬಾವುಟವನ್ನೂ ಹಿಡಿದಿದ್ದೆ. ನಾನು ಆರ್‌ಸಿಬಿ ಆಟಗಾರರನ್ನು ಅಭಿನಂದಿಸಿ, ಕಪ್‌ಗೆ ಮುತ್ತೂ ಕೊಟ್ಟಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

‘ಇಂತಹ ಘಟನೆಗಳು ಬೇರೆ ರಾಜ್ಯದಲ್ಲೂ ನಡೆದಿದೆ. ಬೇಕಿದ್ದರೆ ಅವುಗಳನ್ನೂ ಓದಿ ಹೇಳುತ್ತೇನೆ. ನಿಮ್ಮ ಗರಡಿಯಲ್ಲಿ ಬೆಳೆಯದಿದ್ದರೂ, ಪರಮೇಶ್ವರ ಗಡಿಯಲ್ಲಿ ಬೆಳೆದಿದ್ದೇನೆ’ ಎಂದರು.

ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಈ ಹಿಂದೆ ಆರ್‌ಎಸ್‌ಎಸ್‌ ಚಡ್ಡಿ ಧರಿಸಿದ್ದಾಗಿ ಹೇಳಿದ್ದೀರಿ’ ಎಂದರು.

ಈ ವೇಳೆ ಡಿ.ಕೆ ಶಿವಕುಮಾರ್ ‘ನಮಸ್ತೆ ಸದಾ ವತ್ಸಲೆ…’ ಎಂದು ಆರ್‌ಎಸ್‌ಎಸ್‌ ಗೀತೆ ಹಾಡಿದರು.

ಈ ವೇಳೆ ವಿರೋಧ ಪಕ್ಷದ ಸದಸ್ಯರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಸದಸ್ಯರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

‘ಈ ಸಾಲುಗಳನ್ನು ಕಡತದಿಂದ ತೆಗೆಸಬೇಡಿ’ ಎಂದು ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಇದೇ ವೇಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.