ADVERTISEMENT

ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ: ಡಿ.ಕೆ.ಶಿವಕುಮಾರ್

ಏಸು ಪ್ರತಿಮೆ ಟೀಕಾಕಾರರಿಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 6:17 IST
Last Updated 27 ಡಿಸೆಂಬರ್ 2019, 6:17 IST
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)   

ಬೆಂಗಳೂರು:ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದ ಬಳಿ ಏಸು ಕ್ರಿಸ್ತರ 114 ಅಡಿ ಪ್ರತಿಮೆ ನಿರ್ಮಾಣಕ್ಕೆ ಜಮೀನು ಕೊಡಿಸಿ, ಶಿಲಾನ್ಯಾಸ ನೆರವೇರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಶಿವಕುಮಾರ್ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

‘ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಭದ್ರ ಬುನಾದಿಯಾದ ಸಮಾನತೆ ಮತ್ತು ಸರ್ವಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿರುವವನು ನಾನು. ನನ್ನನ್ನು ಏಳು ಬಾರಿ ಗೆಲ್ಲಿಸಿರುವ ಕನಕಪುರ ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮದ ಜನರೂ ಇದ್ದಾರೆ. ಅವರ ಭಾವನೆಗಳನ್ನು ಗೌರವಿಸುವುದು ನನ್ನ ಧರ್ಮ. ಏಸು ಪ್ರತಿಮೆಗೆ ಜಾಗ ಕೊಟ್ಟಿರುವುದಷ್ಟೇ ಅಲ್ಲ, ನಾನು ಸಚಿವನಾಗಿದ್ದಾಗ ಕೆಂಪೇಗೌಡ ಪ್ರಾಧಿಕಾರ ರಚನೆಯಾಗಿದೆ. ಮೆಯೋಹಾಲ್‌ನಲ್ಲಿ ಕಚೇರಿ ಸ್ಥಾಪನೆಯಾಗಿ, ಬೆಂಗಳೂರಿನಲ್ಲಿ ಐದು ಎಕರೆ ಜಮೀನು ಮಂಜೂರಾಗಿದೆ. ಕೆಂಪೇಗೌಡ ಜಯಂತಿ ಆಚರಣೆ, ತನ್ನಿಮಿತ್ತ ಸರಕಾರಿ ರಜೆ ಘೋಷಣೆ ಮಾಡಿಸಿದ್ದೇನೆ. ಆದಿಚುಂಚನಗಿರಿ ಶ್ರೀ ದಿವಂಗತ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ರಾಮನಗರದ ಬಿಡದಿಯ ಬಾಣಂದೂರು ಹಾಗೂ ಸಿದ್ದಗಂಗಾ ಶ್ರೀಗಳಾದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ರಾಮನಗರದ ಮಾಗಡಿ ಗ್ರಾಮದ ಪ್ರಗತಿಗೆ ತಲಾ 25 ಕೋಟಿ ರುಪಾಯಿ ನಮ್ಮ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಂಜೂರಾಗಿದೆ. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಸಾಹೇಬರ ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ’ ಎಂದುಫೇಸ್‌ಬುಕ್‌ ಪೋಸ್ಟ್ನಲ್ಲಿ ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.