ಡಿ.ಕೆ ಶಿವಕುಮಾರ್
- ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಡಿ.ಕೆ. ಶಿವಕುಮಾರ್ ಅವರಿಗೆ ಒಂದು ಬಾರಿ ಅವಕಾಶ ಸಿಗಲಿ ಎಂದು ರಾಜ್ಯದ ಕೆಲವು ಭಾಗದ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಈಗ ಮುಖ್ಯಮಂತ್ರಿ ಸೀಟು ಖಾಲಿ ಇಲ್ಲ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಹೀಗಾಗಿ ಐದು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಪಕ್ಷದ ಶಿಸ್ತಿನ ಸಿಪಾಯಿಯಾಗಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮಾತಿಗೆ ಬದ್ಧರಾಗಿದ್ದಾರೆ’ ಎಂದರು.
‘ನನ್ನ ಮುಂದೆ ಯಾವುದೇ ಆಯ್ಕೆ ಇಲ್ಲ’ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ‘ಅದು ಅಸಹಾಯಕತೆ ಅಲ್ಲ. ಅದು ಪಕ್ಷ ಹಾಗೂ ಅದರ ನಾಯಕತ್ವಕ್ಕೆ ನೀಡುವ ಗೌರವ. ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ನಾವು ಪಕ್ಷಕ್ಕೆ ಗೌರವ ನೀಡಬೇಕು. ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಶಿವಕುಮಾರ್ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಹೈಕಮಾಂಡ್ ತೀರ್ಮಾನವನ್ನು ಪಾಲಿಸಿ, ಶಿಸ್ತು ಕಾಪಾಡುವುದು ಅವರ ಕರ್ತವ್ಯ. ಹೀಗಾಗಿ ಅವರು ಕೆಲವು ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ’ ಎಂದರು.
‘ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರು ಮುಖ್ಯಮಂತ್ರಿ ಆಗುವ ಭರವಸೆ, ನಂಬಿಕೆ ಇದೆ. ಈ ವಿಚಾರವನ್ನು ವರಿಷ್ಠರು ತೀರ್ಮಾನಿಸಬೇಕು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.