
ಬೆಂಗಳೂರು: ‘ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಯುತ್ತಾರೆ ಎಂಬ ಭರವಸೆ ನನಗಿದೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಯತೀಂದ್ರ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವರಷ್ಟು ತಿಳಿವಳಿಕೆ ಇಲ್ಲ. ಅವರಷ್ಟು ದೊಡ್ಡವರೂ ನಾವಲ್ಲ. ಅವರು ಏನು ಹೇಳುತ್ತಾರೊ ಅದೇ ವೇದವಾಕ್ಯ’ ಎಂದರು.
‘ನಮಗೆ ಸಿಗುವ ನೋಟಿಸ್ ಯತೀಂದ್ರ ಅವರಿಗೆ ಏಕಿಲ್ಲ’ ಎಂಬ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, ‘ಇಕ್ಬಾಲ್ ಹುಸೇನ್ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲರಿಗೂ ಒಂದೇ ನೀತಿ ಇರಬೇಕು’ ಎಂದರು.
‘ಕಾಂಗ್ರೆಸ್ ಪಕ್ಷ ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜೆಡಿಎಸ್, ಬಿಎಸ್‌ಪಿಗೆ ಸೇರಿದವರಿದ್ದಾರೆ. ನಮ್ಮಲ್ಲಿ ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ. ಆ ನಂತರ ಕಾಂಗ್ರೆಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ’ ಎಂದರು.
‘ನೀವು ಮತ್ತು ಡಿ.ಕೆ ಶಿವಕುಮಾರ್ ತಾಳ್ಮೆ ಬಗ್ಗೆ ಮಾತನಾಡುತ್ತಿದ್ದೀರಿ’ ಎಂದಾಗ, ‘ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದರು.
‘ಆ ಕಾಲ ಹತ್ತಿರಕ್ಕೆ ಬರುತ್ತಿದೆಯೇ’ ಎಂಬ ಪ್ರಶ್ನೆಗೆ, ‘ನಾನು ಹಾಗೆ ಭಾವಿಸಿದ್ದೇನೆ’ ಎಂದಷ್ಟೆ ಹೇಳಿದರು.
ನಾನು ಆಕಾಂಕ್ಷಿಯಲ್ಲ: ‘ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಹಾಗೂ ಸರ್ಕಾರದ ತೀರ್ಮಾನದಂತೆ ಆಗುತ್ತದೆ. ಲಾಬಿ ಮಾಡಿ ಗಿಟ್ಟಿಸಿಕೊಳ್ಳುವಂಥದ್ದು ಏನೂ ಇಲ್ಲ’ ಎಂದರು.
‘ಕೆಎಂಎಫ್ ರಾಜ್ಯದ ರೈತರ ಜವಾಬ್ದಾರಿಯುತ ಸಂಸ್ಥೆ. ರೈತರ ಹಿತ ಕಾಯುವುದು ಮುಖ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಹಾಗೂ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ. ನಾನು ಯಾರಿಗೂ ಈ ಜವಾಬ್ದಾರಿ ಬೇಕು ಎಂದು ಕೇಳುವುದಿಲ್ಲ, ಅದರ ಅಗತ್ಯವೂ ಇಲ್ಲ. ನನಗೆ ನನ್ನದೇ ಆದ ಜವಾಬ್ದಾರಿ ಇತಿಮಿತಿಗಳಿವೆ. ನಾನು ಯಾವುದನ್ನೂ ಆಸೆಪಟ್ಟು ಕೇಳುವುದಿಲ್ಲ. ಅದರ ಹಿಂದೆ ಹೋಗುವವನೂ ಅಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.