ADVERTISEMENT

ಶಾಲೆ ತೆರೆಯಬೇಡಿ: ಮುಂದುವರಿದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 21:09 IST
Last Updated 5 ಜೂನ್ 2020, 21:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾಗುವವರೆಗೆ ಶಾಲೆಗಳನ್ನು ಪುನರಾರಂಭಿಸಬೇಡಿ ಎಂದು ಒತ್ತಾಯಿಸಿ ರಾಜ್ಯದ ನಾನಾ ಭಾಗಗಳಿಂದ ಒತ್ತಾಯ ಮುಂದುವರಿದಿದೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆ ಆರಂಭ ಕುರಿತು ತಮ್ಮ ಫೇಸ್‌ಬುಕ್‌ ಪುಟದಲ್ಲಿ ನೀಡಿದ ಹೇಳಿಕೆಗೆ ಐದು ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ತರಾತುರಿಯಲ್ಲಿ ಶಾಲೆ ಆರಂಭಿಸುವುದು ಬೇಡ ಎಂದು ಅನೇಕರು ಮನವಿ ಮಾಡಿದ್ದಾರೆ.

ಪೋಷಕರೊಂದಿಗೆ ಚರ್ಚಿಸಿ: ‘ಪ್ರತಿ ಪೋಷಕರಿಗೂ ಅವರ ಮಕ್ಕಳ ಬಗ್ಗೆ ಆತಂಕ ಇರುತ್ತದೆ. ಶಿಕ್ಷಣ ಸಂಸ್ಥೆಗಳು ಸಹ ಹೊಣೆಗಾರಿಕೆ ಹೊಂದಿವೆ. ಅವರೊಂದಿಗೆ ಕುಳಿತು ಚರ್ಚಿಸಿ ಶಾಲೆ ತೆರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ಸಲಹೆ ನೀಡಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ADVERTISEMENT

‘ಶಾಲೆ ಆರಂಭದಂತೆ ಆನ್‌ಲೈನ್ ಶಿಕ್ಷಣ ಸಹ ಇಂದು ಬಹಳ ಚರ್ಚೆಯ ವಿಷಯ. ಬೆಂಗಳೂರು ನಗರದೊಳಗೆಯೇ ಇಂಟರ್ನೆಟ್‌ ಸಿಗದ ಸ್ಥಿತಿ ಇದೆ. ಇದಕ್ಕೆ ಪೋಷಕರಿಂದಲೂ ವಿರೋಧ ಇದೆ. ಆನ್‌ಲೈನ್ ಶಿಕ್ಷಣ ಕೊಡುತ್ತೇವೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಬೀದಿಗೆ ತಂದು ನಿಲ್ಲಿಸಬೇಡಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಮಧ್ಯೆ, ಕಂಟೈನ್‌ಮೆಂಟ್‌ ವಲಯಗಳನ್ನು ಹೊರತುಪಡಿಸಿ ಉಳಿದೆಡೆ ಶುಕ್ರವಾರ ಮುಖ್ಯ ಶಿಕ್ಷಕರು ಶಾಲೆಗಳಿಗೆ ಬಂದು
ಕಾರ್ಯನಿರ್ವಹಿಸಿದರು.

‘ಪೋಷಕರ ಅಭಿಪ್ರಾಯ ಪಡೆದೇ ಮುಂದಿನ ಕ್ರಮ’
ಕೊಳ್ಳೇಗಾಲ: ‘ಶಾಲೆಗಳ ಪುನರಾರಂಭ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಆಯಾ ಶಾಲೆಗಳಲ್ಲಿ ಜೂನ್ 10ರಿಂದ ಮೂರು ದಿನ ಪೋಷಕರ ಸಭೆ ನಡೆಯಲಿದೆ. ಅವರ ಅಭಿಪ್ರಾಯ ಪಡೆದೇ ನಿರ್ಧರಿಸುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

‘ಈಗ ಕೇಂದ್ರ ಸರ್ಕಾರದ ಆದೇಶದಂತೇ ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಶಾಲಾ ಮಕ್ಕಳಿಗೆ ಆನ್‌ಲೈನ್‌ನಲ್ಲಿ‌ ತರಗತಿಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಶನಿವಾರ ಆದೇಶ ಹೊರಡಿಸಲಾಗುವುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆನ್‌ಲೈನ್‌ ಶಿಕ್ಷಣದ ಬಗ್ಗೆ ಪೋಷಕರಿಂದ ವಿಭಿನ್ನ ಅಭಿಪ್ರಾಯಗಳಿವೆ. ಚಿಕ್ಕ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಲು ವಿರೋಧವಿದೆ. ನಿಮ್ಹಾನ್ಸ್‌ನ ವರದಿಯನ್ನು ಗಮನದಲ್ಲಿಟ್ಟುಕೊಂಡು ಆದೇಶ ಹೊರಡಿಸಲಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.