ADVERTISEMENT

ಕೌಟುಂಬಿಕ ಹಿಂಸೆಗಿಲ್ಲಿದೆ ಮದ್ದು: ‘ಗಂಡ–ಹೆಂಡ್ತಿ ಕೂಡಿ ಕಷ್ಟಕ್ಕ ಎದಿ ಕೊಡ್ರಿ...’

ಪ್ರಜಾವಾಣಿ ವಿಶೇಷ
Published 25 ಜುಲೈ 2020, 20:18 IST
Last Updated 25 ಜುಲೈ 2020, 20:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

– ಸಂತೋಷ ಜಿಗಳಿಕೊಪ್ಪ/ ಸಬೀನಾ ಎ.

‘ಯಾಕಪ್ಪ ಹೊಡಿತಿದಿ ಹೆಂಡ್ತೀನ, ಕೈ ಉದ್ದ ಬಂದಾವೇನು? ಪರಪಂಚದೊಳಗ ಯಾರಿಗೂ ಇಲ್ದಿದ್ದ ಕಷ್ಟ ನಿನಗಷ್ಟ ಬಂದೈತೇನು? ಸಂಸಾರ ಮಾಡುವ ದಾರಿ ಇದಲ್ಲ, ನೋಡಪ. ಗಂಡ–ಹೆಂಡ್ತಿ ಕೂಡಿ ಕಷ್ಟಕ್ಕ ಎದಿ ಕೊಡ್ರಿ...’

ಕೊಪ್ಪಳ ಜಿಲ್ಲೆಯ ಕವಲೂರಿನ ನಿಂಗವ್ವಜ್ಜಿ, ಪತ್ನಿಗೆ ಹಿಂಸೆ ನೀಡುತ್ತಿದ್ದ ಪಕ್ಕದ ಮನೆಯ ಯುವಕನಿಗೆ ಕೌನ್ಸೆಲಿಂಗ್‌ ಮಾಡುತ್ತಿದ್ದ ಪರಿ ಇದು. ‘ಮೊನ್ನೆ ಮಲ್ಲವ್ವನ ಗಂಡನ್ನ ಪೊಲೀಸರು ಹಿಡ್ಕೊಂಡು ಹೋಗ್ಯಾರ, ಗೊತ್ತೈತಿಲ್ಲೊ’ ಎಂದು ಹೆದರಿಸುತ್ತಿದ್ದ ಅಜ್ಜಿ, ‘ಹೆಂಡತಿಗೆ ಇನ್ನು ಹೊಡೆಯುವುದಿಲ್ಲ’ ಎಂದು ಆತನಿಂದ ಪ್ರಮಾಣವನ್ನೂ ಮಾಡಿಸುತ್ತಿದ್ದರು.

ADVERTISEMENT

ಕೌಟುಂಬಿಕ ಹಿಂಸೆ ಹೆಚ್ಚುತ್ತಿರುವ ಕೋವಿಡ್‌ನ ಈ ಕಾಲಘಟ್ಟದಲ್ಲಿ ಊರೂರಲ್ಲೂ ಈಗ ಇಂತಹ ನೋಟಗಳು ಕಾಣಸಿಗುತ್ತವೆ.

ಹಾಸನದ ಹಳ್ಳಿಗಳಲ್ಲಿ ಪತ್ನಿಯರ ಮೇಲೆ ಕೈ ಮಾಡುತ್ತಿದ್ದ ಪುರುಷರಿಗೆ ಈಗ ಪೊಲೀಸರ ಭಯ. ಸ್ವಸಹಾಯ ಸಂಘಟನೆಗಳ ಮೂಲಕ ಸ್ವಉದ್ಯೋಗದಲ್ಲಿ ತೊಡಗಿಕೊಂಡಿರುವ ಮಹಿಳೆಯರು ತಮ್ಮ ಬಳಿಯಲ್ಲಿ ಹೆಚ್ಚುವರಿ ಎಸ್ಪಿ ನಂದಿನಿ ಅವರ ಮೊಬೈಲ್‌ ಸಂಖ್ಯೆಯನ್ನು ಸದಾ ಇಟ್ಟುಕೊಂಡಿರುತ್ತಾರೆ. ಏಟು ಕೊಡಲು ಬಂದ ಪತಿರಾಯನಿಗೆ ‘ಯಾಕೆ ನಂದಿನಿ ಮೇಡಂ ಅವರಿಗೆ ಫೋನ್‌ ಮಾಡಬೇಕೇ’ ಎಂದು ಎದುರೇಟು ಕೊಡುತ್ತಾರೆ.

‘ಗಂಡ ಮಾತಿಗೆ ಬಗ್ಗದಿದ್ದರೆ ನಂದಿನಿ ಮೇಡಂ ಅವರಿಗೆ ಫೋನ್‌ ಹೋಗುತ್ತದೆ. ಹಿಂಸೆಗೆ ಇಳಿದವನಿಗೆ ಕಾನ್‌ಸ್ಟೆಬಲ್‌ಗಳು ಬಂದು ಬುದ್ಧಿ ಕಲಿಸುತ್ತಾರೆ. ಹೀಗಾಗಿ ಕೌಟುಂಬಿಕ ಹಿಂಸೆ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ತಗ್ಗಿವೆ’ ಎಂದು ಹೇಳುತ್ತಾರೆ, ಮಹಿಳೆಯರಲ್ಲಿ
ಜಾಗೃತಿ ಮೂಡಿಸುವಲ್ಲಿ ನಿರತವಾದ ಪ್ರೇರಣಾ ವಿಕಾಸ ವೇದಿಕೆಯ ಅಧ್ಯಕ್ಷೆ ರೂಪ ಹಾಸನ.

ಬೀದರ್‌ನ ಈ ಪ್ರಕರಣವನ್ನು ನೋಡಿ. ಒಬ್ಬ ವ್ಯಕ್ತಿ ಕೆಲಸವಿದಲ್ಲದೆ ಮನೆಯಲ್ಲೇ ಉಳಿದು ಹತಾಶೆಗೊಂಡಿದ್ದ. ಆತನ ಪತ್ನಿ ಮನೆಗೆಲಸ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದಳು.

‘ದುಡಿದ ಹಣ ತನ್ನ ಕೈಗೆ ಇಡಲಿಲ್ಲ ಎಂಬ ಕಾರಣಕ್ಕೆ ಆತ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ಮಹಿಳೆ ಚಿಕಿತ್ಸೆ ಪಡೆಯಲು ಬಂದಾಗ ‘ಸಖಿ’ ಕೇಂದ್ರದವರು ಪ್ರಕರಣ ದಾಖಲಿಸಿಕೊಂಡಿದ್ದರು.

ನಂತರ ಆಕೆಯ ಗಂಡನನ್ನೂ ಕರೆಯಿಸಿ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿ ಕಳುಹಿಸಿದ್ದರು.

‘ನಾವು ನಿರಂತರ ನಿಗಾ ಇಟ್ಟಿದ್ದೇವೆ. ಪತಿ, ಪತ್ನಿ ಇಬ್ಬರೂ ಈಗ ಅನ್ಯೋನ್ಯವಾಗಿದ್ದಾರೆ’ ಎಂದು ಸಖಿ ಕೇಂದ್ರದವರು ಖುಷಿಯಿಂದ ಹೇಳುತ್ತಾರೆ.

ರಾಜಧಾನಿಯ ಬಹುತೇಕ ಕಂಪನಿಗಳ ಕೆಲಸ ಇಂದು ಮನೆಯಿಂದಲೇ ನಡೆಯುತ್ತಿದೆ. ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ‘ವರ್ಕ್ ಫ್ರಂ ಹೋಂ’ ಪರಿಕಲ್ಪನೆಗೆ ಆದ್ಯತೆ ಸಿಕ್ಕಿದೆ. ಅದರಿಂದಾಗಿ ಗೃಹಿಣಿಯರಿಗೆ ಕೆಲಸದ ಒತ್ತಡ ಬೀಳುತ್ತಿದೆ.

‘ಮಾನಸಿಕ ತುಮುಲ ಮತ್ತು ಆರ್ಥಿಕ ಸಂಕಷ್ಟಗಳ ಹತಾಶೆಯಿಂದ ಮಹಿಳೆಯರ ಮೇಲಿನ ಹಿಂಸೆ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ವಿಶ್ಲೇಷಿಸುತ್ತಾರೆ ನಿಮ್ಹಾನ್ಸ್‌ನ ಮನೋರೋಗತಜ್ಞರು.

‘ಆರ್ಥಿಕ ತೊಂದರೆಯೇ ಮನುಷ್ಯನ ಎಲ್ಲ ಅತಿರೇಕದ ವರ್ತನೆಗಳಿಗೆ ಮೂಲ. ಪತಿ–ಪತ್ನಿ ಒಟ್ಟಾಗಿ ಹಣಕಾಸಿನ ಸಮಸ್ಯೆ ನೀಗಿಸಿಕೊಳ್ಳುವ ಸಣ್ಣ–ಪುಟ್ಟ ಹಾದಿಯನ್ನು ಕಂಡುಕೊಂಡರೆ ಹಿಂಸೆ ತಂತಾನೆ ಇಲ್ಲವಾಗುತ್ತದೆ’ ಎನ್ನುತ್ತಾರೆ ಮಂಗಳೂರಿನ ಫಾದರ್ ಮುಲ್ಲರ್‌ ವೈದ್ಯಕೀಯ ಕಾಲೇಜಿನ ಮನೋವೈದ್ಯೆ ಡಾ.ಅರುಣಾ ಯಡಿಯಾಳ್‌.

***

ಆರ್ಥಿಕ ಪರಿಸ್ಥಿತಿ ಹದಗೆಟ್ಟಿ ರುವುದರಿಂದ ಪುರುಷರಲ್ಲಿ ಆತ್ಮವಿಶ್ವಾಸದ ಕೊರತೆ ಸಹಜ. ಇದ ರಿಂದ ಮಹಿಳೆಯರ ಮೇಲಿನ ಹಿಂಸೆ ಹೆಚ್ಚುತ್ತಿದೆ. ದಂಪತಿಗಾಗಿ ಕಪಲ್‌ ಥೆರಪಿ ನೀಡಲಾಗುತ್ತದೆ.

– ಡಾ. ಸುಜ್ಞಾನಿದೇವಿ ಪಾಟೀಲ, ಮನೋವೈದ್ಯೆ, ಡಿಮ್ಹಾನ್ಸ್‌, ಧಾರವಾಡ

ಹಿಂಸಿಸಿದರೆ ಏನು ಮಾಡಬೇಕು?

ಪತಿ ಇಲ್ಲವೆ ಸಂಬಂಧಿಗಳಿಂದ ಕೌಟುಂಬಿಕ ಹಿಂಸೆ ಹೆಚ್ಚಾದರೆ ಯಾವ ರೀತಿಯಲ್ಲೂ ಭಯ ಪಡದೆ ಪೊಲೀಸ್‌ ಠಾಣೆಗೆ ದೂರು ನೀಡಬೇಕು ಎಂದು ನಿಮ್ಹಾನ್ಸ್‌ನ ಕೌನ್ಸೆಲರ್‌ಗಳು ಸಲಹೆ ನೀಡುತ್ತಾರೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆಗಳ ಕುರಿತ ಅಹವಾಲು ಆಲಿಸಲು ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಪ್ರತ್ಯೇಕ ವಿಭಾಗ ಕಾರ್ಯನಿರ್ವಹಿಸುತ್ತಿದೆ. ನೊಂದವರಿಂದ ದೂರು ಪಡೆಯುವ ಕೆಲಸಕ್ಕೆ ಮಹಿಳಾ ಕಾನ್‌ಸ್ಟೆಬಲೊಬ್ಬರನ್ನು ನಿಯೋಜಿಸಲಾಗಿರುತ್ತದೆ. ಅಂಥ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ
ಕೈಗೊಳ್ಳಲಾಗುತ್ತದೆ.

ಹಿಂಸೆಗೆ ಈಡಾದ ಮಹಿಳೆಯರು, ಪೊಲೀಸ್ ನಿಯಂತ್ರಣ ಕೊಠಡಿ (100) ಅಥವಾ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯನ್ನು ನೇರವಾಗಿ ಸಂಪರ್ಕಿಸಬಹುದು. ಬೆಂಗಳೂರಿನಲ್ಲಿ ನಾಲ್ಕು ಮಹಿಳಾ ಪೊಲೀಸ್ ಠಾಣೆಗಳೂ ಇದ್ದು, ಅಲ್ಲಿ ಮಹಿಳಾ ಇನ್‌ಸ್ಪೆಕ್ಟರ್‌ಗಳೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವ್ಯಾಪ್ತಿಯ ಠಾಣೆಯಲ್ಲೂ ನೊಂದ ಮಹಿಳೆಯರು ದೂರು ನೀಡಬಹುದು.

ವನಿತಾ ಸಹಾಯವಾಣಿ (1091) ಆರಂಭಿಸಲಾಗಿದ್ದು, ಮಹಿಳೆಯರಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಲಾಗುತ್ತದೆ. ಕೌನ್ಸೆಲಿಂಗ್ ನಡೆಸುವ ತಜ್ಞರು ಕೇಂದ್ರದಲ್ಲಿ ಇರುತ್ತಾರೆ. ಮಹಿಳೆಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಕಾನೂನು ನೆರವು ಸಹ ದೊರೆಯಲಿದೆ.

***

ಮನೆಯಲ್ಲಿ ಉದ್ಯೋಗ ಮಾಡುತ್ತಿರುವವರ ಜೀವನ ವಿಧಾನದಲ್ಲಿ ಕೂಡ ಬದಲಾವಣೆಯಾಗಿದೆ. ಕೆಲಸಕ್ಕೆ ಪೂರಕ ವಾತಾವರಣ ಇರದಿದ್ದಲ್ಲಿ ಮಾನಸಿಕ ಕಿರಿಕಿರಿ ಉಂಟಾಗಿ, ಕುಟಂಬದ ಸದಸ್ಯರೊಂದಿಗೆ ವೈಮನಸ್ಸು ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯಲ್ಲಿ ಕಾರ್ಯನಿರ್ವಹಿಸುವವರು ಶಿಸ್ತನ್ನು ಪಾಲನೆ ಮಾಡಬೇಕು.

– ಡಾ.ಎಚ್.ಎನ್. ಶಶಿಧರ್, ನಿಮ್ಹಾನ್ಸ್ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ)

ಬೇರೆಬೇರೆ ಮನಃಸ್ಥಿತಿಯುಳ್ಳವರು ದಿನಪೂರ್ತಿ ಒಟ್ಟಿಗೆ ಇರುವಾಗ ವ್ಯತ್ಯಾಸಗಳು ಬರುತ್ತವೆ. ಅದನ್ನು ಸರಿದೂಗಿಸುವುದು ನಮ್ಮ ಕೈಯಲ್ಲೇ ಇದೆ. ಆರ್ಥಿಕ ಮುಗ್ಗಟ್ಟು ಎಲ್ಲರಿಗೂ ಇದೆ. ಕುಟುಂಬಕ್ಕೆ ವ್ಯವಸ್ಥಿತ ಯೋಜನೆ ರೂಪಿಸಬೇಕು. ಮಕ್ಕಳಿದ್ದರೆ ಅವರ ಶಿಕ್ಷಣದ ಕುರಿತು ವೇಳಾಪಟ್ಟಿ ಹಾಕಿಕೊಂಡು ಭವಿಷ್ಯದ ಅನಿಶ್ಚಿತತೆ ಕಡಿಮೆ ಮಾಡಬೇಕು

– ಡಾ.ಅರುಣಾ ಯಡಿಯಾಳ್‌, ಮನೋವೈದ್ಯೆ, ಫಾದರ್ ಮುಲ್ಲರ್‌ ವೈದ್ಯಕೀಯ ಕಾಲೇಜು, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.