ADVERTISEMENT

‘14ರವರೆಗೆ ಅರ್ಜುನ್‌ ಸರ್ಜಾ ಬಂಧಿಸಬೇಡಿ’

ಮೀ–ಟೂ ಆರೋಪ: ಎಫ್‌ಐಆರ್‌ ರದ್ದುಕೋರಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 20:00 IST
Last Updated 2 ನವೆಂಬರ್ 2018, 20:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನಟಿ ಶ್ರುತಿ ಹರಿಹರನ್‌ ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್‌ ಸರ್ಜಾ ಅವರನ್ನು ಇದೇ 14ರವರೆಗೆ ಬಂಧಿಸಬಾರದು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

‘ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ನನ್ನ ವಿರುದ್ಧ ಶ್ರುತಿ ಹರಿಹರನ್‌ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ಅರ್ಜುನ್‌ ಸರ್ಜಾ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜುನ್‌ ಸರ್ಜಾ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ‘ಪ್ರಸಿದ್ಧಿಯ ಹುಚ್ಚಿನಲ್ಲಿ ಶ್ರುತಿ, ಅರ್ಜುನ್‌ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ. ಆರೋಪಿಸಿರುವ ಅಂಶಗಳೆಲ್ಲಾ ಸಿನಿಮಾ ಚಿತ್ರೀಕರಣದ ಭಾಗವಾಗಿದ್ದವು. ಅರ್ಜುನ್‌ ಸರ್ಜಾ 37 ವರ್ಷಗಳ ಕಾಲ ಚಿತ್ರರಂಗದಲ್ಲಿ ತಮ್ಮ ವ್ಯಕ್ತಿತ್ವವನ್ನು ಜತನವಾಗಿ ಗೌರವದಿಂದ ಕಾಪಾಡಿಕೊಂಡು ಬಂದಿದ್ದಾರೆ’ ಎಂದರು.

ADVERTISEMENT

‘ಆರೋಪದ ಅಂಶಗಳೆಲ್ಲಾ ಚಲನಚಿತ್ರದಲ್ಲಿನ ಪಾತ್ರಕ್ಕೆ ಅಗತ್ಯವಾಗಿದ್ದ ಸಂಗತಿಗಳು. ಈಗ ಅವರು ತಕರಾರು ಎಬ್ಬಿಸಿರುವುದಕ್ಕೆ ಕಾರಣ ಶ್ರುತಿ ಮೀ–ಟೂ ಆಂದೋಲನದ ನಾಯಕಿಯಾಗಲು ಹವಣಿಸಿದಂತಿದೆ’ ಎಂದು ಆರೋಪಿಸಿದರು.

ಆಚಾರ್ಯ ಅವರ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ‘ಶ್ರುತಿ ನೀಡಿರುವ ದೂರಿನ ಒಂದೊಂದು ಸಾಲಿನಲ್ಲೂ ಅಪರಾಧ ಎಸಗಿರುವ ಅಂಶಗಳಿವೆ. ನಾನು ಈಗಲೇ ಅರ್ಜಿದಾರರಿಗೆ ಉತ್ತರ ಕೊಡಲು ಸಿದ್ಧನಿದ್ದೇನೆ. ಪ್ರಕರಣಕ್ಕೆ ತಡೆ ನೀಡಬಾರದು’ ಎಂದರು.

ಇದನ್ನು ಮನ್ನಿಸಿದ ನ್ಯಾಯಮೂರ್ತಿ, ‘ಪೊಲೀಸರು ತನಿಖೆ ಮುಂದುವರಿಸಲಿ. ಆದರೆ, ಮುಂದಿನ ವಿಚಾರಣೆ ದಿನವಾದ 14ರವರೆಗೂ ಅರ್ಜುನ್‌ ಸರ್ಜಾ ಅವರನ್ನು ಬಂಧಿಸಬೇಡಿ’ ಎಂದು ಆದೇಶಿಸಿದರು.

ಎಲ್ಲರ ಸಮ್ಮುಖದಲ್ಲಿ ನಡೆದಿದ್ದ ಕ್ರಿಯೆಗಳು..!

ವಿಚಾರಣೆ ವೇಳೆ ಆಚಾರ್ಯ ಅವರು, ಭಗವದ್ಗೀತೆಯ ಎರಡನೇ ಅಧ್ಯಾಯದ 34ನೇ ಶ್ಲೋಕ ಉದ್ಧರಿಸಿ, ‘ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ’ ಅಂದರೆ, ‘ಮರ್ಯಾದೆಯುಳ್ಳ ಮನುಷ್ಯನಿಗೆ ಕೆಟ್ಟ ಹೆಸರು ತಂದರೆ
ಅದು ಮರಣಕ್ಕಿಂತಲೂ ದಾರುಣವಾಗಿರುತ್ತದೆ’ ಎಂದು
ವಿವರಿಸಿದರು.

‘ಶ್ರುತಿ ಆರೋಪಿಸಿರುವಂತೆ ಚುಂಬನ, ಆಲಿಂಗನ... ಎಲ್ಲವೂ ಚಿತ್ರೀಕರಣದ ಭಾಗಗಳಾಗಿದ್ದವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.