‘ಪರಿಸರಕ್ಕಾಗಿ ನಾವು’ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ನದಿಗಳ ಹರಿವನ್ನು ಬದಲಾಯಿಸಬಾರದು. ನೀರಿನ ಕೊರತೆ ಇರುವೆಡೆ ರೈತರು ಆಂದೋಲನದ ಮೂಲಕ ಸಮಸ್ಯೆ ನೀಗಿಸಿಕೊಳ್ಳಬೇಕು’ ಎಂದು ಜಲತಜ್ಞ ರಾಜೇಂದ್ರಸಿಂಗ್ ಅಭಿಪ್ರಾಯಪಟ್ಟರು.
‘ಪರಿಸರಕ್ಕಾಗಿ ನಾವು’ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ‘ಗಂಗಾ ಹಾಗೂ ಬ್ರಹ್ಮಪುತ್ರ ನದಿಗಳನ್ನು ಬೇರೆ ಕಡೆಗೆ ತಿರುಗಿಸಿರುವುದರಿಂದ ಆ ನದಿಗಳು ಕೆಲವೊಂದು ಭಾಗದಲ್ಲಿ ಬತ್ತಿವೆ. ಆದ್ದರಿಂದ ನದಿಗಳ ಹರಿಯುವ ಹಾದಿಯನ್ನು ಬದಲಿಸಬಾರದು’ ಎಂದರು.
‘ವಾಯು, ಆಕಾಶ, ಅಗ್ನಿ, ಭೂಮಿ, ಜಲಗಳೊಂದಿಗಿನ ಸಂಬಂಧವನ್ನು ನಾವು ಇತ್ತೀಚೆಗೆ ಕಳೆದುಕೊಳ್ಳುತ್ತಿದ್ದೇವೆ. ಜಲಮಾಲಿನ್ಯ, ವಾಯು ಮಾಲಿನ್ಯದಿಂದ ರಕ್ಷಿಸುವ ಕೆಲಸವಾಗಬೇಕು. ಗುಂಪಾಗಿ ಪರಿಸರ ರಕ್ಷಣೆ ಮಾಡಿದರೆ ಸಂಘಟನೆಗೆ ಬಲ ಬರುತ್ತದೆ’ ಎಂದು ಹೇಳಿದರು.
‘ಪರಿಸರ ಸಂರಕ್ಷಣೆ ಮಾಡಬೇಕಾದ ಆಡಳಿತಕ್ಕೆೆ ನೈತಿಕ ದಾರಿದ್ರ್ಯ ಬಂದಿದೆ. ಹೊಲಸು ತೆಗೆಯಲು ಮುಂದಾಗಬೇಕಿದ್ದ ಆಡಳಿತವೇ ಪರಿಸರವನ್ನು ಹೊಲಸು ಮಾಡುತ್ತಿದೆ. ಜಾಗತಿಕ ತಾಪಮಾನ ಏರಿಕೆ ಬಗ್ಗೆ ಪರಿಸರ ವಿಜ್ಞಾನಿಗಳು ಮತ್ತು ತಜ್ಞರ ಎಚ್ಚರಿಕೆಯ ಮಾತುಗಳನ್ನು ಅಲಕ್ಷ್ಯ ಮಾಡಿದರೆ ಬಹಳ ಬೆಲೆ ತೆರಬೇಕಾಗುತ್ತದೆ’ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಎಚ್ಚರಿಸಿದರು.
‘ನಾವು ಸೇವಿಸುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ವಿಷಮಯವಾಗುತ್ತಿದೆ. ಮುಂದಿನ ಪೀಳಿಗೆಗೆ ಆಸ್ತಿ, ಚಿನ್ನ ಕೂಡಿಡುವ ಬದಲಿಗೆ ವಿಷಮುಕ್ತ ಗಾಳಿ, ನೀರು ಮತ್ತು ಆಹಾರ ಸಿಗುವಂತೆ ಮಾಡಬೇಕಿದೆ. ನೈತಿಕ ದಾರಿದ್ರ್ಯ ತುಂಬಿರುವ ರಾಜಕೀಯ ಬಿಟ್ಟು ಸಂಪೂರ್ಣವಾಗಿ ಪರಿಸರ ಸಂರಕ್ಷಣೆಯ ಕೆಲಸಕ್ಕೆ ನನ್ನ ಮುಂದಿನ ಜೀವನ ಮುಡಿಪಾಗಿಡುವೆ’ ಎಂದರು.
‘ಪರಿಸರ ನಾಶದಿಂದ ದೇಶದ ಪ್ರಮುಖ ಕೆಲವು ನಗರಗಳಲ್ಲಿ ಆಮ್ಲಜನಕ ಸಿಗದೆ ಸಮಸ್ಯೆ ಎದುರಾಗುತ್ತಿದೆ. ಪರಿಸರ ರಕ್ಷಿಸಲು ‘ಜಲ್-ಜಂಗಲ್-ಜಮೀನ್ ಬಚಾವ್’ ಕಾರ್ಯ ಆಗಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಹೇಳಿದರು.
ಕಪ್ಪತ್ತಗುಡ್ಡದ ಶಿವಕುಮಾರ ಸ್ವಾಮೀಜಿ, ನಿಡಸೋಸಿ ನಿಜಲಿಂಗೇಶ್ವರ ಸ್ವಾಮೀಜಿ, ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಂಘದ ಕಾರ್ಯಾಧ್ಯಕ್ಷ ಆಂಜನೇಯ ರೆಡ್ಡಿ, ಪರಿಸರ ಕಾರ್ಯಕರ್ತರಾದ ಪ್ರೊ. ಟಿ.ವಿ. ರಾಮಚಂದ್ರ, ಪತ್ರಕರ್ತ ಇಂದೂಧರ ಹೊನ್ನಾಪುರ, ನಿರ್ದೇಶಕ ಟಿ.ಎನ್. ಸೀತಾರಾಮ್, ಸುರೇಶ್ ಹೆಬ್ಳೀಕರ್ ಉಪಸ್ಥಿತರಿದ್ದರು.
ಸಕಲ ಜೀವಸಂಕುಲವನ್ನು ಬಾಧಿಸುತ್ತಿರುವ ಪರಿಸರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವ್ಯಕ್ತಿ ಸಮಾಜ ಮತ್ತು ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಲು ಕೆಲಸ ಮಾಡಬೇಕು
ಬೆಟ್ಟಗುಡ್ಡ ಕಾಡು ಹುಲ್ಲುಗಾವಲು ನದಿ ಸಮುದ್ರ ಸೇರಿದಂತೆ ಸಮಗ್ರ ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಯೋಗ್ಯ ಭೂಮಿಯನ್ನು ಉಳಿಸಲು ಶ್ರಮಿಸಬೇಕು
ಸಂಘಟನೆ ಅಭಿವೃದ್ಧಿ ವಿರೋಧಿಯಲ್ಲ. ಪರಿಸರಕ್ಕೆ ಕನಿಷ್ಠ ಹಾನಿಯುಂಟು ಮಾಡುವ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಪರಿಸರ ನಾಶವನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.