ADVERTISEMENT

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಬರಗೂರು ರಾಮಚಂದ್ರಪ್ಪ ಹೇಳಿಕೆಗೆ ಆಕ್ಷೇಪ

ಟೀಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:32 IST
Last Updated 6 ಜೂನ್ 2022, 19:32 IST
   

ಬೆಂಗಳೂರು: ‘6ನೇ ತರಗತಿಯ ಸಮಾಜ ವಿಜ್ಞಾನ ಭಾಗ-2 ರಲ್ಲಿನ ಬಸವಣ್ಣನವರ ವಿಷಯಕ್ಕೆ ಸಂಬಂಧಿಸಿದಂತೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮೂಲಗಳನ್ನು ಪರಿಶೀಲಿಸದೆಯೇ ಹೇಳಿಕೆ ನೀಡಿದ್ದಾರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದ್ದಾರೆ.

‘ಈ ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ಏನು ಬರೆಯಲಾಗಿದೆಯೋ ಅದು ಬಿಜೆಪಿ ಸರ್ಕಾರ ರಚಿಸಿದ್ದ ಡಾ.ಜಿ.ಎಸ್. ಮುಡಂಬಡಿತ್ತಾಯ ಅವರ ಸಮಿತಿಯ ಪಠ್ಯದಲ್ಲೇ ಇದೆ. ಅದನ್ನು ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯಾಗಲಿ ಅಥವಾ ರೋಹಿತ್ ಚಕ್ರತೀರ್ಥ ಸಮಿತಿಯಾಗಲಿ ಪರಿಷ್ಕರಿಸಿಲ್ಲ. ಅದು ಯಥಾವತ್ತಾಗಿದೆ. ಹೀಗಿರುವಾಗ, ಅಲ್ಪಸ್ವಲ್ಪ ಬದಲಿಸಿ ಮರುಪರಿಷ್ಕರಣೆಯಲ್ಲಿ ಉಳಿಸಿಕೊಂಡಿದ್ದಾರೆ ಎಂಬುದು ಎಷ್ಟು ಸತ್ಯ’ಎಂದುಪ್ರಶ್ನಿಸಿದ್ದಾರೆ.

‘ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯ ಸತ್ಯವೇ ಆಗಿದ್ದಲ್ಲಿ ಡಾ.ಮುಡಂಬಡಿತ್ತಾಯ ಪಠ್ಯದಲ್ಲಿ ಪರಿಷ್ಕರಿಸಿರುವುದನ್ನು ವಿವರಿಸಬೇಕು ಮತ್ತು ಅದರಲ್ಲಿ ರೋಹಿತ್ ಸಮಿತಿ ಯಾವುದನ್ನು ಕೈಬಿಟ್ಟಿದ್ದಾರೆ ಎಂಬುದನ್ನು ಸವಿವರವಾಗಿ ತಿಳಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಬರಗೂರು ಅವರಂತವರು ಮೂಲಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದರೆ ತಪ್ಪು ಅಭಿಪ್ರಾಯಗಳು ಮೂಡುವುದಿಲ್ಲ ಏಕೆಂದರೆ, ಅವರು ಏನೇ ಹೇಳಿದರು ಸಮಾಜ ಸತ್ಯವೆಂದು ನಂಬುತ್ತದೆ. ಇವರಿಂದ ಸುಳ್ಳುಗಳನ್ನು ನಿರೀಕ್ಷಿಸುವುದಿಲ್ಲ. ಅಧ್ಯಕ್ಷರಾದವರು ಎಲ್ಲಾ ಪಠ್ಯಗಳನ್ನು ಸಾಲುಗಳನ್ನು ನೋಡಲು ಸಾಧ್ಯವಿಲ್ಲ ಎಂಬುದನ್ನು ಸಹ ತಿಳಿದಿದ್ದೇನೆ’ಎಂದುಪ್ರಕಟಣೆಯಲ್ಲಿತಿಳಿಸಿದ್ದಾರೆ.

‘ವಿರೋಧಿಸುವ ರಾಜಕೀಯ ಸಲ್ಲ’ (ಶಿವಮೊಗ್ಗ ವರದಿ): ‘ನೂತನ ಪಠ್ಯಕ್ರಮದಲ್ಲಿ ಲೋಪಗಳಿದ್ದರೆ ಅದರ ಪುನರ್ ಪರಿಶೀಲನೆಗೆ ಅವಕಾಶ ಮಾಡಿಕೊಡಲಿ. ಅದನ್ನು ಬಿಟ್ಟು, ಕೆಲವು ಸಾಹಿತಿಗಳೂ ರಾಜಕಾರಣಿಗಳಂತೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.

ಸೋಮವಾರ ಮಾತನಾಡಿದ ಅವರು, ‘ಈ ಹಿಂದೆ ಬರಗೂರು ರಾಮಚಂದ್ರಪ್ಪ ಸಮಿತಿ ಅಸ್ತಿತ್ವದಲ್ಲಿದ್ದಾಗ ಅವರ ವಿಚಾರಕ್ಕೆ ತಕ್ಕಂತೆ ಪಠ್ಯಪುಸ್ತಕಗಳನ್ನು ತಂದಿದ್ದರು. ಈಗ ಪರಿಷ್ಕರಣೆ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.

‘ಪರಿಷ್ಕೃತ ಪಠ್ಯದಲ್ಲಿ ಯಾವುದಾದರೂ ಭಾಗ ಸರಿ ಇಲ್ಲ ಅನ್ನೋ ಅಂಶಗಳಿದ್ದರೆ ಪ್ರಾಮಾಣಿಕವಾಗಿ ಕುಳಿತು ಚರ್ಚಿಸಿ ತಿದ್ದಿಸುವ ಕೆಲಸ ಮಾಡಬೇಕು. ಆದರೆ ಇದರಲ್ಲಿ ರಾಜಕೀಯ ತಂದು ಇಡೀ ರಾಜ್ಯದಲ್ಲಿ ಗೊಂದಲ ಸೃಷ್ಟಿ ಮಾಡುವ ಕೆಲಸವನ್ನು ಕೆಲವು ಸಾಹಿತಿಗಳು ಮಾಡುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.