ADVERTISEMENT

ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋನ್: ನಿರಾಣಿ

ತಪ್ಪಿತಸ್ಥರಿಗೆ ಐದು ಪಟ್ಟು ದಂಡ l ಕಂದಾಯ ವಿಭಾಗ ಮಟ್ಟದಲ್ಲಿ ಗಣಿ ಅದಾಲತ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 17:47 IST
Last Updated 27 ಜನವರಿ 2021, 17:47 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಂಗಳೂರು:ಗಣಿಗಾರಿಕೆಯಲ್ಲಿ ಅಕ್ರಮ ಪತ್ತೆ ಹಚ್ಚಲು ಡ್ರೋನ್‌ ಮೂಲಕ ಸಮೀಕ್ಷೆ ನಡೆಸಿ, ತಪ್ಪಿತ್ಥರಿಗೆ ಐದು ಪಟ್ಟು ದಂಡ ವಿಧಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಡ್ರೋನ್‌ ಬಳಕೆಯಿಂದ ಎಷ್ಟು ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಬಹುದು. ಈ ಕುರಿತು ಸುದೀರ್ಘ ಚರ್ಚೆಗೆ ಗುರುವಾರ ಸಂಜೆ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

‘ಆ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಅಕ್ರಮ ಗಣಿಗಾರಿಕೆ ಬಗ್ಗೆ ವಿಸ್ತೃತ ಮಾಹಿತಿಯನ್ನು ಪಡೆಯಲಾಗುವುದು. ಗಣಿ ನಡೆಸುವವರು ಎಲ್ಲ ರೀತಿಯ ಪರವಾನಗಿಗಳನ್ನು ಪಡೆದುಕೊಂಡಿರುತ್ತಾರೆ. ಆದರೆ, ನಿಗದಿ ಮಾಡಿದ ಪ್ರಮಾಣಕ್ಕಿಂತ ಹಲವು ಪಟ್ಟು ಹೆಚ್ಚು ಖನಿಜಗಳನ್ನು ತೆಗೆದು ಸಾಗಿಸುತ್ತಾರೆ. ಉದಾಹರಣೆಗೆ ಒಂದು ಲಾರಿಗೆ ಅನುಮತಿ ಪಡೆದು 10 ಲಾರಿಗಳಲ್ಲಿ ಖನಿಜ ಸಾಗಿಸುತ್ತಾರೆ. ಇದನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ಡ್ರೋನ್ ಸಮೀಕ್ಷೆ ಮೂಲಕ ಇದನ್ನು ಪತ್ತೆ ಮಾಡಬಹುದು’ ಎಂದರು.

ADVERTISEMENT

ಕಾನೂನು ವ್ಯಾಪ್ತಿಗೆ ಒಳಪಡದ ಗಣಿಗಳನ್ನು ಸಕ್ರಮ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗಣಿ ಅದಾಲತ್‌: ಸಣ್ಣ ಪುಟ್ಟ ಗಣಿಗಳನ್ನು ನಡೆಸುತ್ತಿರುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಪರಿಹರಿಸಲು ಅದಾಲತ್‌ಗಳನ್ನು ನಡೆಸಲು ನಿರ್ಧರಿಸಿದ್ದು, ರಾಜ್ಯದ ಐದು ಕಂದಾಯ ವಿಭಾಗಳಲ್ಲೂ ಅದಾಲತ್‌ಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಅದಾಲತ್ ನಡೆಸುವುದರಿಂದ ಶೇ 75 ರಷ್ಟು ಸಮಸ್ಯೆಗಳು ಸ್ಥಳೀಯವಾಗಿ ಇತ್ಯರ್ಥವಾಗುತ್ತವೆ. ಗಣಿಕಾರಿಕೆಗೆ ಅನುಮತಿ ಪಡೆಯಲು ರಾಜಧಾನಿಗೆ ಬರುವ ಅವಶ್ಯಕತೆ ಇಲ್ಲ. ಮರಳು, ಜಲ್ಲಿಕಲ್ಲು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳೂ ಜನರಿಗೆ ಕಾನೂನು ಪ್ರಕಾರ ದೊರೆಯುವಂತೆ ಮಾಡಲಾಗುವುದು ಎಂದು
ತಿಳಿಸಿದರು.

ರಾಜ್ಯದಲ್ಲೂ ಗಣಿ ತರಬೇತಿ ಕೇಂದ್ರ

ಜಾರ್ಖಂಡ್‌ನ ರಾಂಚಿಯಲ್ಲಿರುವ ‘ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಮೈನ್‌ ಲರ್ನಿಂಗ್‌ ಸೆಂಟರ್‌’ ಮಾದರಿಯಲ್ಲಿ ರಾಜ್ಯದಲ್ಲೂ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಗಣಿಗಾರಿಕೆ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಉದ್ದಿಮೆದಾರರಿಗೆ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ಎಲ್ಲಿ ಮಾಡಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಅನೇಕ ಜನರಿಗೆ ಗಣಿಗಾರಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಂತಹವರಿಗೆ ಸ್ಪಷ್ಟ ತಿಳಿವಳಿಕೆ ನೀಡುವ ಉದ್ದೇಶದಿಂದ ತರಬೇತಿ ಅಗತ್ಯವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.