ADVERTISEMENT

ಕಾಂಗ್ರೆಸ್‌ನ 15 ಶಾಸಕರಿಗೆ ಟಿಕೆಟ್‌ ಬೇಡ: ಹಿರಿಯ ಮುಖಂಡರು ಬೇಡಿಕೆ

ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಗಮನಕ್ಕೆ ತಂದ ಹಿರಿಯ ಮುಖಂಡರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 22:52 IST
Last Updated 14 ಮಾರ್ಚ್ 2023, 22:52 IST
   

ನವದೆಹಲಿ: ತಮ್ಮ ಕ್ಷೇತ್ರಗಳಲ್ಲಿ ಹೆಸರು ಕೆಡಿಸಿಕೊಂಡಿರುವ ಕಾಂಗ್ರೆಸ್‌ನ 10 ರಿಂದ 15 ಶಾಸಕರಿಗೆ ಯಾವುದೇ ಕಾರಣಕ್ಕೆ ಈ ಸಲ ಟಿಕೆಟ್‌ ನೀಡಬಾರದು ಎಂದು ಪಕ್ಷದ ಕೆಲವು ಹಿರಿಯ ಮುಖಂಡರು ಬೇಡಿಕೆ ಮುಂದಿಟ್ಟಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಹಲವು ಮುಖಂಡರು ಸೋಮವಾರ ಮತ್ತು ಮಂಗಳವಾರ ಭೇಟಿ ಮಾಡಿ ಕರ್ನಾಟಕದಲ್ಲಿ ಪಕ್ಷದ ಸ್ಥಿತಿಗತಿ ಕುರಿತು ಚರ್ಚಿಸಿದರು. ಈ ವೇಳೆ, ಅವರು ಈ ವಿಷಯವನ್ನು ಅಧ್ಯಕ್ಷರ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

ಶಾಸಕರಾದ ಎಂ.ಬಿ.ಪಾಟೀಲ, ಎಚ್‌.ಕೆ.ಪಾಟೀಲ, ದಿನೇಶ್‌ ಗುಂಡೂರಾವ್‌, ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ, ಮಾಜಿ ಸಂಸದರಾದ ಕೆ.ಎಚ್‌.ಮುನಿಯಪ್ಪ, ಬಿ.ಎನ್‌.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಹಲವು ಮುಖಂಡರು ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ADVERTISEMENT

ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಉದ್ದೇಶದಿಂದ ಇದೇ 17ರಂದು ದೆಹಲಿಯಲ್ಲಿ ಸಭೆ ನಡೆಸಲು ಕಾಂಗ್ರೆಸ್‌ ವರಿಷ್ಠರು ತೀರ್ಮಾನಿಸಿದ್ದಾರೆ. ಪಕ್ಷದ ಶಾಸಕರಿರುವ ಕ್ಷೇತ್ರಗಳೂ ಸೇರಿ 120 ಕ್ಷೇತ್ರಗಳಿಗೆ ಈಗಾಗಲೇ ಒಬ್ಬ ಸಂಭವನೀಯ ಅಭ್ಯರ್ಥಿಯ ಹೆಸರನ್ನು ಎಐಸಿಸಿ ನೇಮಿಸಿದ ಸ್ಕ್ರೀನಿಂಗ್‌ ಸಮಿತಿ ಅಂತಿಮಗೊಳಿಸಿದೆ. 70 ಕ್ಷೇತ್ರಗಳಿಗೆ ಎರಡು– ಮೂವರು ಸಂಭವನೀಯ ಅಭ್ಯರ್ಥಿಗಳ ಹೆಸರು ಗುರುತಿಸಿ ಸಮಿತಿ ಪಟ್ಟಿ ಮಾಡಿದೆ. ಈ ಎರಡೂ ಪಟ್ಟಿಗಳು ಈಗಾಗಲೇ ಪಕ್ಷದ ವರಿಷ್ಠರಿಗೆ ತಲುಪಿದೆ.

ಈ ಪಟ್ಟಿಯನ್ನು ಪಕ್ಷದ ಎಲ್ಲ ಮುಖಂಡರ ಜತೆಗೆ ಸಮಾಲೋಚನೆ ನಡೆಸದೆ ಸಿದ್ಧಪಡಿಸಲಾಗಿದೆ. ಪಟ್ಟಿಯಲ್ಲಿ ಕೆಲವು ಲೋಪಗಳು ಆಗಿವೆ. ಹೈಕಮಾಂಡ್‌ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಪಕ್ಷದ ಮುಖಂಡರು ಖರ್ಗೆ ಅವರ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

‘ನಾಲ್ಕೈದು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬದಲು ಕುಟುಂಬ ಸದಸ್ಯರು ಅಥವಾ ಶಾಸಕರು ಸೂಚಿಸಿದ ವ್ಯಕ್ತಿಗಳಿಗೆ ಟಿಕೆಟ್‌ ನೀಡಲು ಶಿಫಾರಸು ಮಾಡಲಾಗಿದೆ. ಇದು ಸರಿಯಲ್ಲ. ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಿದರೆ ಕ್ಷೇತ್ರದ ಇತರ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಯಾವಾಗ’ ಎಂದು ಹಿರಿಯ ಮುಖಂಡರೊಬ್ಬರು ಖಾರವಾಗಿ ಪ್ರಶ್ನಿಸಿದರು.

‘ಬಿಜೆಪಿ ಗುಜರಾತ್‌ನಲ್ಲಿ 43 ಶಾಸಕರಿಗೆ ಟಿಕೆಟ್‌ ನಿರಾಕರಿಸಿತು. ಪಕ್ಷವು ದಾಖಲೆಯ ಗೆಲುವು ಸಾಧಿಸಲು ಈ ಪ್ರಯೋಗವೂ ಒಂದು ಕಾರಣ. ಕರ್ನಾಟಕದಲ್ಲೂ ಅದೇ ಮಾದರಿಯ ಪ್ರಯೋಗ ಮಾಡಲು ಮುಂದಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಇಂತಹ ಹೊಸ ಆಲೋಚನೆಗಳಿಗೆ ಅವಕಾಶವೇ ಇಲ್ಲ. 10ರಿಂದ 15 ಶಾಸಕರು ಗೆಲ್ಲುವುದು ಕಷ್ಟ ಎಂಬ ಸ್ಥಿತಿ ಇದೆ. ಈ ಸಂಬಂಧ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಂದ ಮಾಹಿತಿ ಕಲೆ ಹಾಕಬೇಕು. ಅಲ್ಲಿ ಹೊಸ ಮುಖಗಳಿಗೆ ವೇದಿಕೆ ಕಲ್ಪಿಸಬೇಕು. ಇಲ್ಲದಿದ್ದರೆ ಪಕ್ಷದ ಸೀಟುಗಳ ಸಂಖ್ಯೆ 100ರ ಆಜುಬಾಜಿನಲ್ಲೇ ನಿಲ್ಲಲಿದೆ’ ಎಂದು ಹಿರಿಯ ಮುಖಂಡರೊಬ್ಬರು ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.