ADVERTISEMENT

ಸಂಗಾತಿಗಾಗಿ ಕಾಡಿನಲ್ಲಿ ‘ಕುಶ’ನ ಅಲೆದಾಟ: ಕಾಡಾನೆಗಳೊಂದಿಗೆ ಹೊಡೆದಾಟದ ಶಂಕೆ

ಮೂರು ದಿನವಾದರೂ ಕುಶಾಲನಗರ ಸಮೀಪದ ‘ದುಬಾರೆ ಸಾಕಾನೆ ಶಿಬಿರ’ಕ್ಕೆ ವಾಪಸ್ಸಾಗದ ಸಾಕಾನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 10:09 IST
Last Updated 23 ನವೆಂಬರ್ 2019, 10:09 IST
   

ಕುಶಾಲನಗರ (ಕೊಡಗು): ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ‘ದುಬಾರೆ ಸಾಕಾನೆ ಶಿಬಿರ’ದಲ್ಲಿ ಆನೆಯೊಂದು ಸಂಗಾತಿಗಾಗಿ ಕಾಡಿನಲ್ಲಿ ಅಲೆದಾಟ ನಡೆಸುತ್ತಿದೆ. ಮೂರು ದಿನಗಳ ಹಿಂದೆ ಶಿಬಿರದಿಂದ ಕಾಡಿಗೆ ಮೇಯಲು ತೆರಳಿದ್ದ 26 ವರ್ಷದ ‘ಕುಶ’ ಹೆಸರಿನ ಸಾಕಾನೆ ಶಿಬಿರಕ್ಕೆ ಮರಳಿಲ್ಲ. ಆನೆಗಾಗಿ ಮಾವುತರು ಹಾಗೂ ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ವಿರಾಜಪೇಟೆ ತಾಲ್ಲೂಕಿನ ಬೇಟೆಕಾಡು ಎಂಬಲ್ಲಿ ಪುಂಡಾಟ ನಡೆಸುತ್ತಿದ್ದ ಎರಡು ಆನೆಗಳನ್ನು ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಸಾಕಾನೆ ಶಿಬಿರದಲ್ಲಿ ಪಳಗಿಸಲಾಗಿತ್ತು. ಜೊತೆಯಲ್ಲಿ ಹಿಡಿದ ಈ ಆನೆಗಳಿಗೆ ‘ಲವ’ ಹಾಗೂ ‘ಕುಶ’ ಎಂದು ಹೆಸರಿಡಲಾಗಿತ್ತು. ಇದೀಗ ಜೊತೆಗಾರ ‘ಲವ’ನನ್ನು ಬಿಟ್ಟು ‘ಕುಶ’ ಆನೆಯು ಏಕಾಂಗಿಯಾಗಿ ಸಂಗಾತಿಯನ್ನು ಅರಸುತ್ತ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಿದೆ.

ಕಾದಾಟಕ್ಕೆ ಇಳಿಯಿತೇ ಆನೆ?: ಶಿಬಿರದಲ್ಲಿನ ಸಾಕಾನೆಗಳಿಗೆ ಮದ ಬಂದಾಗ ಕಾಡಿಗೆ ಹೋಗಿ ಒಂದೆರಡು ರಾತ್ರಿ ಅಲ್ಲಿಯೇ ಕಾಡಾನೆಗಳೊಂದಿಗೆ ಇದ್ದು ಮರಳಿ ಬರುವುದು ಸಾಮಾನ್ಯ. ಆದರೆ, ಈ ‘ಕುಶ’ ಆನೆ ಮೂರು ದಿನ ಕಳೆದರೂ ಶಿಬಿರಕ್ಕೆ ವಾಪಸ್ಸಾಗಿಲ್ಲ. ಕಾಡಾನೆಗಳೊಂದಿಗೆ ಕಾದಾಟಕ್ಕೆ ಇಳಿದು ತೊಂದರೆಗೆ ಸಿಲುಕಿರುವುದೇ ಎಂಬ ಆತಂಕದಲ್ಲಿಯೇ ಮಾವುತರಾದ ಮಣಿ, ಕಾವಾಡಿಗ ರವಿ ಹಾಗೂ ಅರಣ್ಯ ಸಿಬ್ಬಂದಿಗಳು ಕಾಡಿನಲ್ಲಿ ಆನೆಗಾಗಿ ಹುಡುಕಾಡುತ್ತಿದ್ದಾರೆ.

ADVERTISEMENT

‘ಇದುವರೆಗೆ ಕುಶ ಆನೆ ಪತ್ತೆಯಾಗಿಲ್ಲ. ಸಂಗಾತಿ ಅರಸುತ್ತ ಕಾಡಿನಲ್ಲಿ ಅಲೆದಾಡುತ್ತಿರಬಹುದು. ಇತರೆ ಸಾಕಾನೆಗಳ ಸಹಾಯದಿಂದ ಆನೆಯನ್ನು ಪತ್ತೆ ಹಚ್ಚಿ ಮರಳಿ ಶಿಬಿರಕ್ಕೆ ಕರೆತರಲು ಪ್ರಯತ್ನ ನಡೆಯುತ್ತಿದೆ’ ಎಂದು ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್ ಮಾಹಿತಿ ನೀಡಿದರು.

ಕಳೆದ ಕೆಲವು ತಿಂಗಳ ಹಿಂದಷ್ಟೇ ‘ಗೋಪಿ’ ಹೆಸರಿನ ಆನೆಯೂ ಮದವೇರಿ ಕಾಡಿಗೆ ಹೋಗಿ ಕಾಡಾನೆಗಳ ಸಹವಾಸ ಮಾಡಿತ್ತು. ಈ ಆನೆಯನ್ನು ಮರಳಿ ಶಿಬಿರಕ್ಕೆ ಕರೆ ತರಲು ಮಾವುತರು ಹಾಗೂ ಅರಣ್ಯ ಸಿಬ್ಬಂದಿಗಳ ಹರಸಾಹಸವನ್ನೇ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.