ADVERTISEMENT

ರೋಹಿತ್‌ ಚಕ್ರತೀರ್ಥ ತಪ್ಪು ಮಾಡಿದ್ದರೆ ಸಮರ್ಥನೆ ಇಲ್ಲ: ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 31 ಮೇ 2022, 11:30 IST
Last Updated 31 ಮೇ 2022, 11:30 IST
ಸದಾನಂದಗೌಡ (ಸಂಗ್ರಹ ಚಿತ್ರ)
ಸದಾನಂದಗೌಡ (ಸಂಗ್ರಹ ಚಿತ್ರ)   

ಮಂಡ್ಯ: ‘ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ವೇಳೆ ತಪ್ಪಾಗಿದ್ದರೆ ಅವರನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳುವುದಿಲ್ಲ, ಪಠ್ಯಪುಸ್ತಕ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಸಂಸದ ಡಿ.ಬಿ.ಸದಾನಂದಗೌಡ ಇಲ್ಲಿ ಮಂಗಳವಾರ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕುವೆಂಪು ಅವರ 2 ಗೀತೆಗಳನ್ನು ನಾಡಗೀತೆಯನ್ನಾಗಿ ಘೋಷಣೆ ಮಾಡಿದ್ದೇ ಬಿಜೆಪಿ ಸರ್ಕಾರ. ಹಿಂದಿನ ಯಾವುದೇ ಸರ್ಕಾರಗಳು ಮಾಡಿಲ್ಲ, ಯಾವ ಸಿದ್ದರಾಮಯ್ಯ, ಯಾವ ಕಾಂಗ್ರೆಸ್‌ ಸರ್ಕಾರವೂ ಮಾಡಿಲ್ಲ. ನಾವು ಗೌರವ ಕೊಟ್ಟವರಿಗೆ ಅಗೌರವ, ಅಪಮಾನ ತರುವ ಕೆಲಸ ಮಾಡುತ್ತೇವೆಯೇ’ ಎಂದು ಪ್ರಶ್ನಿಸಿದರು.

‘ಹಿಂದೆ ಕುವೆಂಪು ಅವರ 7 ಗದ್ಯ, ಪದ್ಯಗಳನ್ನು ಪಠ್ಯದಲ್ಲಿ ಅಳವಡಿಸಲಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ 10 ಗದ್ಯ, ಪದ್ಯಗಳನ್ನು ಪಠ್ಯಕ್ಕೆ ಅಳವಡಿಸಲಾಗಿದ್ದೇವೆ. ಕುವೆಂಪು ಅವರಿಗೆ ನಾವು ಹೆಚ್ಚಿನ ಗೌರವ ಸಲ್ಲಿಸಿದ್ದೇವೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸದ್ಯ ಗೊಂದಲಗಳು ಉಂಟಾಗುತ್ತಿವೆ, ಆದರೆ ಯಾರಿಗೂ ಅಪಮಾನ ತರುವ ಕೆಲಸಗಳು ಆಗಿಲ್ಲ’ ಎಂದರು.

‘ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಎಲ್ಲಾ ವರ್ಗಗಳಿಗೂ ಪ್ರಾತಿನಿಧ್ಯ ನೀಡುವ ಕೆಲಸ ಮಾಡಲಾಗಿದೆ. ಗೆಲ್ಲುವ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ, ಈ ವಿಚಾರದಲ್ಲಿ ನಮ್ಮ ಮುಖಂಡರ ನಡುವೆ ಯಾವುದೇ ಅಸಮಾಧಾನ ಇಲ್ಲ. ಕ್ಷೇತ್ರಗಳಲ್ಲಿ ಹೆಚ್ಚು ಓಡಾಡುವ ನಾಯಕರಿಗೆ ವಿಧಾನಸಭೆ ಟಿಕೆಟ್‌ ನೀಡಲಾಗುವುದು, ಹೆಚ್ಚು ಓಡಾಡದವರಿಗೆ ರಾಜ್ಯಸಭೆ ಚುನಾವಣೆಗೆ ಟಿಕೆಟ್‌ ನೀಡಲಾಗಿದೆ’ಎಂದರು.

‘ಕಾಂಗ್ರೆಸ್, ಜೆಡಿಎಸ್‌ನಲ್ಲಿರುವ ಅತೃಪ್ತಿ ಬಿಜೆಪಿ ವರದಾನವಾಗಲಿದೆ. ಎರಡೂ ಪಕ್ಷಗಳ ಅತೃಪ್ತರು ಬಿಜೆಪಿ ಒಳ್ಳೆಯ ಪಕ್ಷ ಎಂದು ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿಕುಮಾರ್‌ ನಡುವಿನ ಶೀತಲ ಸಮರದಿಂದಲೂ ಬಿಜೆಪಿಗೆ ಒಳ್ಳೆಯದಾಗಲಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.