ಬೆಂಗಳೂರು: ‘ಜುಲೈ ಒಂದರಿಂದ ಇಡೀ ತಿಂಗಳು ಆಸ್ತಿಯ ಇ-ಖಾತಾ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ, ವಿವಿಧ ಸಮಸ್ಯೆಗಳಿಗೆ ಪರಿಹಾರ, ನಂಬಿಕೆ ನಕ್ಷೆ, ಇ– ಖಾತಾ ವಿತರಣೆ, ಹಸಿರು ಬೆಂಗಳೂರು ಮತ್ತಿತರ ವಿಷಯಗಳ ಕುರಿತು ಬೆಂಗಳೂರು ವ್ಯಾಪ್ತಿಯ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಜತೆ ಬುಧವಾರ ಅವರು ಸಭೆ ನಡೆಸಿದರು.
ಬಳಿಕ ಮಾತನಾಡಿದ ಶಿವಕುಮಾರ್, ‘ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಕ್ಷೇತ್ರದಲ್ಲಿ ಜುಲೈ ತಿಂಗಳಿನಿಂದ ಪ್ರಾಯೋಗಿಕವಾಗಿ ಇ– ಖಾತಾ ವಿತರಿಸಲಾಗುವುದು. 25 ಸಾವಿರ ಆಸ್ತಿಗಳ ಖಾತಾ ದಾಖಲೆಗಳು ಸಿದ್ಧಗೊಂಡಿವೆ’ ಎಂದರು.
‘ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಈ ಪೈಕಿ 5 ಲಕ್ಷ ಮಂದಿ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದಾರೆ. 20 ಲಕ್ಷ ಆಸ್ತಿಗಳ ದಾಖಲೆಗಳ ಅಪ್‌ಲೋಡ್ ಬಾಕಿ ಇದೆ’ ಎಂದು ತಿಳಿಸಿದರು.
‘ಜುಲೈ 1ರಿಂದ ಇ– ಖಾತಾ ಆಂದೋಲನ ನಡೆಸಲಾಗುವುದು. ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ನೀಡಿ ಇ– ಖಾತಾ ಮಾಡಿಸಿಕೊಳ್ಳಲು ಒಂದು ತಿಂಗಳ ಕಾಲ ಆಂದೋಲನ ಹಮ್ಮಿಕೊಳ್ಳಲಾಗುವುದು. ಈ ಕುರಿತು ಪ್ರತಿ ಮನೆಗೆ ತೆರಳಿ ಮಾಹಿತಿ ನೀಡಲಾಗುವುದು. ಅಲ್ಲದೆ, ಜಾಹೀರಾತು ಮೂಲಕವೂ ಪ್ರಚಾರ ಮಾಡಲಾಗುವುದು’ ಎಂದರು.
‘ನಗರದಲ್ಲಿ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಕಾಮಗಾರಿ ಗುಣಮಟ್ಟವನ್ನು ನಾನು ತಪಾಸಣೆ ಮಾಡಿದ್ದೇನೆ. ಕೆಲವು ಕಡೆ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದರು.
‘ಬಿ ಖಾತಾ ನೀಡುವ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕಾನೂನು ಆಯಾಮಗಳ ಕುರಿತು ಚರ್ಚಿಸಿ ಅಧಿಕೃತವಾಗಿ ಘೋಷಣೆ ಮಾಡಲಾಗುವುದು’ ಎಂದು ತಿಳಿಸಿದರು.
ಸಚಿವರಾದ ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಎಂ. ಕೃಷ್ಣಪ್ಪ, ಪ್ರಿಯ ಕೃಷ್ಣ, ಆನೇಕಲ್ ಶಿವಣ್ಣ, ಎಂ.ಸಿ. ಶ್ರೀನಿವಾಸ್, ಬಿಜೆಪಿಯ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಸಭೆಯಲ್ಲಿದ್ದರು.
‘ಪಾಲಿಕೆ ರಚನೆ: ಚರ್ಚಿಸಿ ತೀರ್ಮಾನ’
‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆ ರಚನೆ ಮಾಡಬೇಕು ಎಂಬ ವಿಚಾರವಾಗಿ ಪಕ್ಷದ ಎಲ್ಲ ನಾಯಕರ ಜತೆ ಚರ್ಚೆ ಮಾಡಿದ್ದೇನೆ. ವಿರೋಧ ಪಕ್ಷದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಿದ ಬಳಿಕ ತೀರ್ಮಾನ ಮಾಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ‘ಸ್ವಚ್ಛ ಬೆಂಗಳೂರು ಕಾರ್ಯಕ್ರಮದಡಿ ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಕಸವಿರುವ ಜಾಗದ ಫೋಟೊ ತೆಗೆದು ಈ ಸಂಖ್ಯೆಗೆ ರವಾನಿಸಿದರೆ ಒಂದು ವಾರದಲ್ಲಿ ಆ ಜಾಗದಲ್ಲಿರುವ ಕಸ ವಿಲೇವಾರಿ ಮಾಡಲಾಗುವುದು’ ಎಂದರು. ‘ತಮ್ಮ ಕ್ಷೇತ್ರಗಳಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರವಾಗಿ ಶಾಸಕರು ಗಮನಹರಿಸುವಂತೆ ಸೂಚನೆ ನೀಡಿದ್ದೇನೆ. ರಸ್ತೆ ಕಾಮಗಾರಿಗೆ ಅನುದಾನವನ್ನೂ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.