
ಸತೀಶ್ ಸೈಲ್
ಬೆಂಗಳೂರು: ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಕದ್ದು ಸಾಗಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ದಾಖಲಿಸಿರುವ ದೂರಿನಲ್ಲಿ, ‘ಈ ಕಂಪನಿಯು ಅದಿರನ್ನು ಅಕ್ರಮವಾಗಿ ಸಾಗಿಸಿದ ಕಾರಣಕ್ಕೆ ರಾಜ್ಯದ ಬೊಕ್ಕಸಕ್ಕೆ ₹44.09 ಕೋಟಿ ನಷ್ಟವಾಗಿದೆ’ ಎಂದು ವಿವರಿಸಿದೆ.
‘ಸೈಲ್ ಅವರ ಕಂಪನಿಯು ಬಳ್ಳಾರಿಯ ಕೆಲ ಅದಿರು ಗಣಿಗಾರಿಕೆ ಕಂಪನಿಗಳಿಂದ ಈ ಕಬ್ಬಿಣದ ಅದಿರನ್ನು ಸಾಗಿಸಿದೆ. ಇದಕ್ಕಾಗಿ ಆ ಕಂಪನಿಗಳಿಗೆ ₹46.18 ಕೋಟಿ ಪಾವತಿಸಲಾಗಿದೆ. ಸೈಲ್ ಅವರ ಕಂಪನಿಯು ಆ ಅದಿರನ್ನು ಚೀನಾಕ್ಕೆ ಸಾಗಿಸಿದೆ. ಅಲ್ಲಿ ಸೈಲ್ ಅವರ ಒಡೆತನದ ಕಂಪನಿಗಳೇ ಆ ಅದಿರನ್ನು ಖರೀದಿಸಿವೆ. ನಂತರ ಚೀನಾದ ಇತರ ಕಂಪನಿಗಳಿಗೆ ಮಾರಾಟ ಮಾಡಿವೆ’ ಎಂದು ಇ.ಡಿ ವಿವರಿಸಿದೆ.
‘ಸೈಲ್ ಅವರ ಚೀನಾದಲ್ಲಿ ಹೊಂದಿರುವ ಜಿಐ ಐರನ್ ಆ್ಯಂಡ್ ಸ್ಟೀಲ್ ಇನ್ವೆಸ್ಟ್‌ಮೆಂಟ್ ಕಂಪನಿ ಲಿಮಿಟೆಡ್ ಮೂಲಕವೇ ಈ ವಹಿವಾಟುಗಳು ನಡೆದಿವೆ. ಜತೆಗೆ ಸತೀಶ್ ಸೈಲ್ ಅವರು ಚೀನಾದ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ (ಹಾಂಗ್‌ಕಾಂಗ್ ಶಾಖೆ) ಲಿಮಿಟೆಡ್, ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಪ್ ಚೈನಾದಲ್ಲಿ ಖಾತೆಗಳನ್ನು ಹೊಂದಿದ್ದು, ವೈಯಕ್ತಿಕ ಹಾಗೂ ಕಂಪನಿಯ ಹಣಕಾಸು ವಹಿವಾಟುಗಳನ್ನು ಈ ಖಾತೆಗಳ ಮೂಲಕವೇ ನಡೆಸಿದ್ದಾರೆ’ ಎಂದು ವಿವರಿಸಿದೆ.
‘ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್, ಆಶಾಪುರ ಮಿನಿಕೆಮ್ ಲಿಮಿಟೆಡ್, ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಸ್ವಸ್ತಿಕ್ ಸ್ಟೀಲ್ಸ್ (ಹೊಸಪೇಟೆ) ಲಿಮಿಟೆಡ್, ಲಾಲ್ ಮಹಲ್ ಲಿಮಿಟೆಡ್ ಮತ್ತು ಪಿಜೆಎಸ್ ಓವರ್‌ಸೀಸ್ ಲಿಮಿಟೆಡ್ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್ ಜತೆಗೆ ಅಕ್ರಮ ವಹಿವಾಟು ನಡೆಸಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.