ಬೆಂಗಳೂರು: ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ, ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 24.50 ಕೆ.ಜಿಯಷ್ಟು ಚಿನ್ನದ ಗಟ್ಟಿಗಳನ್ನು ಪತ್ತೆ ಮಾಡಿದ್ದಾರೆ.
ವಿಚಾರಣೆ ವೇಳೆ ವೀರೇಂದ್ರ ಅವರು ನೀಡಿದ್ದ ಮಾಹಿತಿ ಆಧಾರದಲ್ಲಿ ಚಿತ್ರದುರ್ಗ ಮತ್ತು ಚಳ್ಳಕೆರೆ ವಿವಿಧ ಬ್ಯಾಂಕ್‌ಗಳಲ್ಲಿ ಶನಿವಾರ ಶೋಧ ಕಾರ್ಯ ಆರಂಭಿಸಲಾಗಿತ್ತು. ಭಾನುವಾರ ಬೆಳಗ್ಗೆಯವರೆಗೂ ಶೋಧ ನಡೆದಿದ್ದು, ಒಂದು ಲಾಕರ್‌ನಲ್ಲಿ 24.50 ಕೆ.ಜಿ.ಯಷ್ಟು ಚಿನ್ನದ ಗಟ್ಟಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಜತೆಗೆ 17 ವಜ್ರದ ಉಂಗುರಗಳು, ಇತರ ಒಡವೆಗಳು ಪತ್ತೆಯಾಗಿವೆ. ವೀರೇಂದ್ರ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ಇನ್ನಷ್ಟು ಲಾಕರ್‌ಗಳು ಇದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ ತೆರೆಯಲಾಗಿರುವ ಲಾಕರ್‌ಗಳಲ್ಲಿ, ಕಂತೆಗಟ್ಟಲೆ ಆಸ್ತಿ–ದಾಖಲೆ ಪತ್ರಗಳು ಪತ್ತೆಯಾಗಿವೆ. ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದೆ.
ಬೇನಾಮಿ ಕಾರುಗಳು: ವೀರೇಂದ್ರ ಮನೆ ಮತ್ತು ಲಾಕರ್‌ಗಳಲ್ಲಿ ಒಟ್ಟು 9 ಐಷಾರಾಮಿ ಕಾರುಗಳ ನೋಂದಣಿ ಕಾರ್ಡ್ ಪತ್ತೆಯಾಗಿತ್ತು. ಅವುಗಳ ಆಧಾರದಲ್ಲಿ ಆ ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅದರಲ್ಲಿ ಅಗ್ಗದ ಬೆಲೆಯ ಒಂದು ಎಸ್‌ಯುವಿ ಮಾತ್ರವೇ ವೀರೇಂದ್ರ ಹೆಸರಿನಲ್ಲಿ ಇದ್ದು, ಮರ್ಸಿಡೆಸ್ ಬೆಂಜ್ ಕಂಪನಿಯ ಆರು ಕಾರುಗಳು ಬೇರೆಯವರ ಹೆಸರಿನಲ್ಲಿವೆ ಎಂದು ವಿವರಿಸಿವೆ.
ಕೆಲವು ಕಾರುಗಳು ಬೇನಾಮಿ ಹೆಸರಿನಲ್ಲಿ ಇದ್ದರೆ, ಇನ್ನೂ ಕೆಲವು ಸೆಕೆಂಡ್ ಹ್ಯಾಂಡ್ ಆಗಿ ಖರೀದಿಸಲಾಗಿದೆ. ಅವುಗಳ ಮಾಲೀಕತ್ವವನ್ನು ಬದಲಾಯಿಸಿಕೊಂಡಿಲ್ಲ. ಆದರೆ ಬಹುತೇಕ ಕಾರುಗಳ ನೋಂದಣಿ ಸಂಖ್ಯೆ 0003 ಆಗಿದೆ. ಹೀಗಾಗಿ ಅವೆಲ್ಲವೂ ಬೇನಾಮಿ ಸ್ವತ್ತುಗಳೇ ಆಗಿರುವ ಸಾಧ್ಯತೆ ಇದೆ. ಕಾರುಗಳು ಯಾರ ಹೆಸರಿನಲ್ಲಿ ಇವೆಯೋ ಅವರನ್ನು ಹುಡುಕಲಾಗುತ್ತಿದೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.