ADVERTISEMENT

ಹಣ ಗಳಿಕೆ ಉದ್ದೇಶದ ಶಿಕ್ಷಣ ಅಪಾಯಕಾರಿ: ವಿಧಾನಸಭಾಧ್ಯಕ್ಷ ಕಾಗೇರಿ

ಎಸ್.ವರದಾಚಾರ್ಯರ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 9:52 IST
Last Updated 22 ಅಕ್ಟೋಬರ್ 2022, 9:52 IST
ಎಸ್.ವರದಾಚಾರ್ಯರ ಶತಮಾನೋತ್ಸವ ಸಮಾರಂಭ
ಎಸ್.ವರದಾಚಾರ್ಯರ ಶತಮಾನೋತ್ಸವ ಸಮಾರಂಭ   

ಮೈಸೂರು: ‘ಹಣ ಗಳಿಕೆಯ ಉದ್ದೇಶದ ಶಿಕ್ಷಣ ಅಪಾಯಕಾರಿಯಾದುದು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ‘ಪಂಡಿತರತ್ನ ಕೆ.ಎಸ್.ವರದಾಚಾರ್ಯ ಶತಮಾನೋತ್ಸವ ಸಮಿತಿ’ಯಿಂದ ಎರಡು ದಿನಗಳವರೆಗೆ ಆಯೋಜಿಸಿರುವ ‘ಪಂಡಿತರತ್ನ ಕೆ.ಎಸ್.ವರದಾಚಾರ್ಯ ಶತಮಾನೋತ್ಸವ’ ಉದ್ಘಾಟನಾ ಸಮಾರಂಭದಲ್ಲಿ ‘ಸಮನ್ವಯ ವರದ’ ಸಂಸ್ಮರಣ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪರಕೀಯರ ಕಾರಣದಿಂದಾಗಿ, ಹಣ ಗಳಿಕೆಯ‌ ಶಿಕ್ಷಣವೇ ಸಿಕ್ಕಿದೆಯೇ‌ ಹೊರತು ಜ್ಞಾನ ಗಳಿಕೆಯ ‌ಶಿಕ್ಷಣ ಸಿಕ್ಕಿಲ್ಲ. ಈಗ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಆಶಾಕಿರಣವಾಗಿದೆ. ನೈತಿಕ ಶಿಕ್ಷಣದ ಮೌಲ್ಯಗಳನ್ನು ಹೆಚ್ಚಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಮಕ್ಕಳಿಗೆ ಕಠಿಣ ಪರಿಶ್ರಮದ ಶಿಕ್ಷಣ ಸಿಕ್ಕಾಗ ಮಾತ್ರವೇ ಜ್ಞಾನಾರ್ಜನೆ ಆಗುತ್ತದೆ’ ಎಂದರು.

ದೇಶವೇ ಮೊದಲಾಗಬೇಕು:‘ದೇಶ ಮೊದಲು ಎನ್ನುವ ಮನೋಭಾವ ಎಲ್ಲರಲ್ಲೂ ಬರಬೇಕು. ನಮ್ಮ ಧರ್ಮ- ಸಂಸ್ಕೃತಿಯ ರಕ್ಷಣೆಯಾಗಬೇಕು. ವೈಯಕ್ತಿಕ ಹಿತ, ನಂಬಿಕೆ, ಆಚಾರ-ವಿಚಾರಗಳ ನಡುವೆ ರಾಷ್ಟ್ರ ಚಿಂತನೆಗೆ ಮೊದಲ ಪ್ರಾಧಾನ್ಯತೆ ನೀಡಬೇಕು’ ಎಂದು ತಿಳಿಸಿದರು.

‘ಕೊಡುಗೆ ನೀಡಿದ ಹಿರಿಯರನ್ನು ನೆನೆಯುವುದು ಸುಸಂಸ್ಕೃತ ಸಮಾಜದ ಲಕ್ಷಣ. ಇದರ ಮೂಲಕ ಇಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕು’ ಎಂದು ಹೇಳಿದರು.

ಮೈಸೂರು ರಾಜಮನೆತನ ಸ್ಮರಿಸಬೇಕು:‘ಮೈಸೂರಿನ ರಾಜಮನೆತನವನ್ನು ಸದಾ ಸ್ಮರಿಸಬೇಕು. ವಿದ್ವಾಂಸರಿಗೆ ರಾಜಾಶ್ರಯ ನೀಡಿದ ಮನೆತನವದು. ಅದರಿಂದಲೇ ನಮ್ಮ ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ರಕ್ಷಣೆಯಾಗಿದೆ ಹಾಗೂ ಬೆಳೆದಿದೆ. ಪರಕೀಯರು ನಮ್ಮ ನಂಬಿಕೆಯ, ಶ್ರದ್ಧೆಯ ಕೇಂದ್ರಗಳನ್ನು ಘಾಸಿಗೊಳಿಸಿರಬಹುದು. ಪುಸ್ತಕಗಳನ್ನು ಸುಟ್ಟಿರಬಹುದು. ಆದರೆ, ನಮ್ಮ ಜ್ಞಾನವನ್ನು ಒಯ್ಯಲಾಗಲಿಲ್ಲ. ಹೀಗಾಗಿಯೇ, ಭಾರತದಿಂದ ಒಳಿತಾಗುತ್ತದೆ ಎಂಬ ನಂಬಿಕೆಯು ಇಡೀ ವಿಶ್ವಕ್ಕೇ ಬಂದಿದೆ’ ಎಂದು ಪ್ರತಿಪಾದಿಸಿದರು.

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಪರಸ್ಪರ ವಿರೋಧವಿಲ್ಲದ ರೀತಿಯಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎನ್ನುವುದೇ ಧರ್ಮ’ ಎಂದರು.

ದಾಖಲಿಸಬೇಕು:‘ವರದಾಚಾರ್ಯರ ‌ಪ್ರಭಾವ ಉತ್ತರ ಭಾರತದಲ್ಲೂ ಸಾಕಷ್ಟು ಪ್ರಮಾಣದಲ್ಲಿತ್ತು. ಇಂತಹ ವಿದ್ವಾಂಸರನ್ನು ದಾಖಲಿಸುವ ಕಾರ್ಯ ನಡೆಯಬೇಕು. ಅದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಧರ್ಮದ ಬಗ್ಗೆ ತಿಳಿಸಿದಂತೆಯೂ ಆಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿಶ್ರಾಂತ ಕುಲಪತಿ ಡಾ.‍‍ಪರಮೇಶ್ವರ ನಾರಾಯಣಶಾಸ್ತ್ರಿ ಮತ್ತು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗದ ಮುಖ್ಯಸ್ಥ ಡಾ.ಚಕ್ರವರ್ತಿ ರಂಗನಾಥನ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸನ್ಮಾನಿಸಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿದರು. ಸುತ್ತೂರು ಮಠದ ಶಿವರಾತ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಮೇಲುಕೋಟೆ ನಂಬಿಮಠದ ಬಿ.ವಿ.ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪ ಸಿಂಹ, ಮೇಯರ್ ಶಿವಕುಮಾರ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ, ನಗರ ಹಾಗೂ ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇದ್ದರು.

ಪ್ರೊ.ಟಿ.ಎನ್.ಪ್ರಭಾಕರ್ ಸ್ವಾಗತಿಸಿದರು. ಗ್ರಂಥದ ಕುರಿತು ಎಚ್.ವಿ.ನಾಗರಾಜರಾವ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.