ADVERTISEMENT

ಸಿಬಿಎಸ್‌ಇ ಪರೀಕ್ಷೆ ರದ್ದು ನಿರ್ಧಾರ: ಶೀಘ್ರವೇ ಸೂಕ್ತ ತೀರ್ಮಾನ -ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 15:03 IST
Last Updated 1 ಜೂನ್ 2021, 15:03 IST
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್   

ಬೆಂಗಳೂರು: ಸಿಬಿಎಸ್ಇ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಕುರಿತಂತೆ ರಾಜ್ಯದಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ʼಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು‌ ಮಾಡಿರುವ ಹಿನ್ನೆಲೆ, ರಾಜ್ಯ ಪಠ್ಯಕ್ರಮ ಅನುಸರಿಸಿ‌ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳು, ಮೌಲ್ಯಮಾಪನದ ಅವಶ್ಯಕತೆ‌ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ವಿಸ್ತೃತ ಚರ್ಚೆ‌ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆʼ ಎಂದಿದ್ದಾರೆ.

ದೇಶದಲ್ಲಿ ಕೋವಿಡ್-19 ಕಾರಣಗಳಿಂದಾಗಿ ಈ ಸಾಲಿನ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ADVERTISEMENT

ಪರೀಕ್ಷೆ ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಂಗಳವಾರ ತಜ್ಞರು ಹಾಗೂ ಅಧಿಕಾರಗಳ ಸಭೆ ನಡೆಸಲಾಯಿತು. ಸಭೆಯ ಬಳಿಕ ಸರ್ಕಾರ ಪರೀಕ್ಷೆ ರದ್ದು ಪಡಿಸುವ ನಿರ್ಧಾರ ಪ್ರಕಟಿಸಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು, 'ಭಾರತ ಸರ್ಕಾರವು 12ನೇ ತರಗತಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ರದ್ದು ಪಡಿಸಲು ನಿರ್ಧರಿಸಿದೆ. ಸಾಕಷ್ಟು ಸಲಹೆಗಳನ್ನು ಪಡೆದ ಬಳಿಕ ನಾವು ವಿದ್ಯಾರ್ಥಿ ಸ್ನೇಹಿ ತೀರ್ಮಾನವನ್ನು ಕೈಗೊಂಡಿದ್ದೇವೆ. ನಮ್ಮ ಯುವ ಸಮೂಹದ ಭವಿಷ್ಯ ಹಾಗೂ ಆರೋಗ್ಯವನ್ನು ಕಾಪಾಡುವಂತಹ ನಿರ್ಧಾರ ಇದಾಗಿದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.