
ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂಬುದರ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಲವು ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂದು ಯುಟ್ಯೂಬ್ ವಾಹಿನಿ ಒಂದರಲ್ಲಿ ಈಚೆಗೆ ವಿಡಿಯೊ ಒಂದನ್ನು ಪ್ರಸಾರ ಮಾಡಲಾಗಿತ್ತು. ಅದರ ಬೆನ್ನಲ್ಲೇ ಮೊಟ್ಟೆ ತಿನ್ನಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ‘ಕೆಲವು ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಇವೆ ಎಂದು ಸುದ್ದಿ ಓಡಾಡಿದೆ. ಆದರೆ ನಾವು ಸೆಪ್ಟೆಂಬರ್‌ನಲ್ಲಿ 125 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದೆವು. ಆ ಪೈಕಿ 123 ಮಾದರಿಗಳು ಸುರಕ್ಷಿತ ಎಂಬ ವರದಿ ಬಂದಿತ್ತು. ಈಗ ಮತ್ತೆ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ಆ ಬಗ್ಗೆ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
‘ಕೆಲವು ಸುದ್ದಿ ಬಂದ ತಕ್ಷಣ ಮೊಟ್ಟೆಯನ್ನು ಬಳಸಬೇಡಿ, ತಿನ್ನಬೇಡಿ ಎಂದು ಹೇಳಲಾಗದು. ಹೀಗಾಗಿ ಜನರು ಆತಂಕಪಡಬೇಕಿಲ್ಲ’ ಎಂದಿದ್ದಾರೆ.
ಯೂಟ್ಯೂಬ್ ವಾಹಿನಿ ಸುದ್ದಿ: ‘ಎಗೋಝ್’ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ನೈಟ್ರೊಫ್ಯೂರಾನ್ಸ್ ಎಂಬ ಆ್ಯಂಟಿಬಯೋಟಿಕ್ ಅಂಶ ಇದೆ ಎಂದು ‘ಟ್ರಸ್ಟಿಫೈಡ್’ ಯೂಟ್ಯೂಬ್ ವಾಹಿನಿ ಈಚೆಗೆ ಸುದ್ದಿ ಪ್ರಸಾರ ಮಾಡಿತ್ತು. ಆ ಕಂಪನಿಯ ಮೊಟ್ಟೆಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವುಗಳಲ್ಲಿ 0.73 ಮೈಕ್ರಾನ್‌ನಷ್ಟು ನೈಟ್ರೊಫ್ಯೂರಾನ್ಸ್ ಮತ್ತು ಅದರ ಉಳಿಕೆಗಳು ಇರುವುದು ಪತ್ತೆಯಾಯಿತು ಎಂದು ಪರೀಕ್ಷಾ ವರದಿಯನ್ನೂ ಸುದ್ದಿಯೊಂದಿಗೆ ನೀಡಿತ್ತು.
ಈ ಬಗ್ಗೆ ಅಭಿಪ್ರಾಯ ನೀಡಿದ್ದ ವೈದ್ಯರೊಬ್ಬರು, ‘ನೈಟ್ರೊಫ್ಯೂರಾನ್ಸ್ ಕ್ಯಾನ್ಸರ್‌ಕಾರಕ ಅಂಶ’ ಎಂದು ಹೇಳಿದ್ದರು. ನಿರೂಪಕ, ‘ಎಗೋಝ್ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಸ್ವಲ್ಪವೂ ಆ್ಯಂಟಿಬಯೋಟಿಕ್ ಅಂಶ ಇಲ್ಲ ಎಂದು ಆ ಕಂಪನಿ ಹೇಳಿಕೊಳ್ಳುತ್ತದೆ. ಆದರೆ ಅದು ಸುಳ್ಳು ಎಂಬುದನ್ನು ಈ ವರದಿ ಸಾಬೀತುಪಡಿಸಿದೆ’ ಎಂದಿದ್ದರು.
ಎಗೋಝ್ ಕಂಪನಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಯಿತು. ಅದರ ಬೆನ್ನಲ್ಲೇ ಕಂಪನಿಯು ತನ್ನ ಅಧಿಕೃತ ‘ಎಕ್ಸ್‘ ಖಾತೆಯಲ್ಲಿ ತಮ್ಮ ಮೊಟ್ಟೆಗಳ ಪರೀಕ್ಷಾ ವರದಿಯನ್ನು ಪ್ರಕಟಿಸಿತು. ಜತೆಗೆ ಮೊಟ್ಟೆಯಲ್ಲಿನ ಎಲ್ಲ ಅಂಶಗಳೂ ನಿಗದಿತ ಪ್ರಮಾಣದಲ್ಲಿಯೇ ಇವೆ ಎಂದಿತ್ತು.
1 ಮೈಕ್ರೊಗ್ರಾಂವರೆಗೂ ವಿನಾಯತಿ
ನೈಟ್ರೊಫ್ಯೂರಾನ್ಸ್ ಅನ್ನು ಯಾವುದೇ ರೂಪದಲ್ಲಿ ಬಳಸಬಾರದು ಐರೋಪ್ಯ ದೇಶಗಳು ಬಹಳ ಹಿಂದೆಯೇ ನಿಷೇಧ ಹೇರಿವೆ. ಆದರೆ ಭಾರತದಲ್ಲಿ ಪೂರ್ಣಪ್ರಮಾಣದ ನಿಷೇಧವಿಲ್ಲ.
ಬದಲಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ), ‘ಪ್ರತಿ ಕೆ.ಜಿ. ಉತ್ಪನ್ನದಲ್ಲಿ ಗರಿಷ್ಠ 1 ಮೈಕ್ರೊಗ್ರಾಂನಷ್ಟು ನೈಟ್ರೊಫ್ಯೂರಾನ್ಸ್ ಇರಬಹುದು ಎಂಬ ವಿನಾಯತಿ ನೀಡಿದೆ. ಮೊಟ್ಟೆ, ಕೋಳಿಮಾಂಸ, ಮೇಕೆ–ಕುರಿ ಮಾಂಸಕ್ಕೂ ಈ ವಿನಾಯತಿ ಅನ್ವಯವಾಗುತ್ತದೆ.
ನೈಟ್ರೊಫ್ಯೂರಾನ್ಸ್ ಆಧಾರಿತ ದ್ರಾವಣ ಮತ್ತು ಔಷಧಗಳನ್ನು ಮಾಂಸದ ಕೋಳಿಗಳಿಗೆ ಮತ್ತು ಮೊಟ್ಟೆ ಕೋಳಿಗಳಿಗೆ ನೀಡುವ ಅಭ್ಯಾಸವಿದೆ. ಮೊದಲು ಇದರ ಬಳಕೆ ವ್ಯಾಪಕವಾಗಿತ್ತು. ಈಗ ನಿರ್ಬಂಧವಿದೆ. ಕೋಳಿಗಳಿಗೆ ಆಹಾರ ಮತ್ತು ನೀರಿನ ಮೂಲಕ ನೈಟ್ರೊಫ್ಯೂರಾನ್ಸ್ ನೀಡಲಾಗುತ್ತದೆ. ಇದು ದೀರ್ಘಕಾಲದವರೆಗೆ ಕೋಳಿ ಮಾಂಸದಲ್ಲಿ ಉಳಿಯುತ್ತದೆ. ಮೊಟ್ಟೆಗಳಲ್ಲೂ ಅದರ ಅಂಶ ಉಳಿಯುವ ಸಾಧ್ಯತೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.