ADVERTISEMENT

ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ

ಇ–ಮೇಲ್‌, ಎಸ್‌ಎಂಎಸ್‌ ಮುಖಾಂತರ ಗ್ರಾಹಕರಿಗೆ ಬಿಲ್‌

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 20:29 IST
Last Updated 3 ಏಪ್ರಿಲ್ 2020, 20:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿದ್ಯುತ್ ತಯಾರಕರ ಬಿಲ್ ಪಾವತಿ ಹಾಗೂ ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಲು ಗ್ರಾಹಕರು ಆನ್‍ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವಂತೆ ಇಂಧನ ಇಲಾಖೆ ಮನವಿ ಮಾಡಿದೆ.

‘ಕೊರೊನಾ ಹಿನ್ನೆಲೆ ಗ್ರಾಹಕರಿಗೆ ಮೂರು ತಿಂಗಳ ಅವಧಿಗೆ ವಿದ್ಯುತ್ ಬಿಲ್ ಪಾವತಿ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಯಾವುದೇ ನಿರ್ದೇಶನ ನೀಡಿಲ್ಲ’ ಎಂದು ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.

‘ಗ್ರಾಹಕರಿಗೆ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್‍ಗಳನ್ನು ಇ-ಮೇಲ್, ಎಸ್‍ಎಂಎಸ್, ವಾಟ್ಸ್ಆ್ಯಪ್ ಮೂಲಕ ಕಳುಹಿಸಲಾಗುವುದು. ಗ್ರಾಹಕ ಸಹಾಯವಾಣಿ 1912ಕ್ಕೆ ಕರೆ ಮಾಡಿ, ಖಾತೆಯ ಐಡಿ ಹಾಗೂ ಮೊಬೈಲ್ ಸಂಖ್ಯೆ ನೀಡಿ ಬಿಲ್ ವಿವರ ಪಡೆಯಬಹುದು. ವಿದ್ಯುತ್ ಸರಬರಾಜು ಕಂಪನಿಯ ಜಾಲತಾಣದಲ್ಲಿ ನೋಂದಾಯಿಸಿಕೊಂಡು ಅಥವಾ ಸ್ಥಳೀಯ ಕಚೇರಿಗೆ ಭೇಟಿ ನೀಡಿಯೂ ವಿವರ ಪಡೆಯಬಹುದು.

ADVERTISEMENT

ಆನ್‍ಲೈನ್ ಪಾವತಿಗಳನ್ನು ಸಂಸ್ಥೆಯ ಜಾಲತಾಣ, ಮೊಬೈಲ್ ಆಪ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಹಾಗೂ ಇನ್ನಿತರ ವಿಧಾನಗಳ ಮೂಲಕ ಪಾವತಿಸಬಹುದು. ಅನಿವಾರ್ಯ ಕಾರಣಗಳಿಂದ ಬಿಲ್ ಪಾವತಿಗೆ ಸಮಸ್ಯೆಯಾದಲ್ಲಿ, ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಯ ಉಪವಿಭಾಗಾಧಿಕಾರಿ ಕಚೇರಿಗೆ ಲಿಖಿತ ಮನವಿ ಸಲ್ಲಿಸಬಹುದು. ಇದು ಏಪ್ರಿಲ್ ತಿಂಗಳಿಗೆ ಮಾತ್ರ ಅನ್ವಯವಾಗಲಿದ್ದು, ಮೇ 1ರಿಂದ ಎಂದಿನಂತೆ ಪ್ರಕ್ರಿಯೆ ನಡೆಯಲಿದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.