ADVERTISEMENT

ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಸಜ್ಜು

ರೆಜಿತ್ ಕುಮಾರ್
Published 27 ಮೇ 2019, 12:37 IST
Last Updated 27 ಮೇ 2019, 12:37 IST
ಪುಂಡಾನೆ ಸೆರೆಗೆ ಸಜ್ಜಾಗಿರುವ ದುಬಾರೆಯ ಸಾಕಾನೆಗಳು ಹಾಗೂ ಮಾವುತರು
ಪುಂಡಾನೆ ಸೆರೆಗೆ ಸಜ್ಜಾಗಿರುವ ದುಬಾರೆಯ ಸಾಕಾನೆಗಳು ಹಾಗೂ ಮಾವುತರು   

ಸಿದ್ದಾಪುರ: ನೆಲ್ಯಹುದಿಕೇರಿ ಹಾಗೂ ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಹಿಂಡಿನ ಪೈಕಿ ಜನರಿಗೆ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಜ್ಜಾಗಿದೆ.

ನೆಲ್ಯಹುದಿಕೇರಿಯ ಅಭ್ಯತ್ ಮಂಗಲ, ಅತ್ತಿಮಂಗಲ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆ ಹಿಂಡುಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ದಾಂದಲೆ ನಡೆಸುತ್ತಿದ್ದವು. ಮರಿ ಆನೆ, ಸಲಗ ಸೇರಿದಂತೆ ಕಾಡಾನೆಗಳ ಹಿಂಡು ದಿನಂಪ್ರತಿ ತೋಟದಿಂದ ತೋಟಕ್ಕೆ ಲಗ್ಗೆ ಇಟ್ಟು ಬೆಳೆ ನಾಶಪಡಿಸುತ್ತಿದ್ದು, ಜನರ ಮೇಲೂ ದಾಳಿಗೆ ಮುಂದಾಗುತ್ತಿತ್ತು. ಇದರಿಂದಾಗಿ ಇತ್ತೀಚೆಗೆ ಅರಣ್ಯ ಇಲಾಖೆಯು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ನಡೆಸಿ, ಕಾಡಾನೆ ಹಿಂಡನ್ನು ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಲಾಗಿತ್ತು. ಆದರೆ, ಕಾಡಾನೆಗಳು ಅರಣ್ಯದಿಂದ ಮರಳಿ ಕಾಫಿ ತೋಟಗಳಿಗೆ ಬರುತ್ತಿದ್ದು, ಬೆಳೆಗಾರರು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದರು.

ನೆಲ್ಯಹುದಿಕೇರಿಯ ಮೇರಿಲ್ಯಾಂಡ್ ಕಾಫಿ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ ಜನರಿಗೆ ತೊಂದರೆ ನೀಡುತ್ತಿರುವ ಪುಂಡಾನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುತಿಸಿದ್ದರು. ಕಾಡಾನೆಯನ್ನು ಸೆರೆಹಿಡಿಯಲು ಸಾಕಾನೆಗಳೊಂದಿಗೆ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಹರ್ಷ, ಧನಂಜಯ, ಈಶ್ವರ, ವಿಕ್ರಂ, ಅಜ್ಜಯ್ಯ, ಲಕ್ಷ್ಮಣ ಈಗಾಗಲೇ ನೆಲ್ಯಹುದಿಕೇರಿಯ ಮೇರಿ ಲ್ಯಾಂಡ್ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಸಾಕಾನೆಗಳ ಸಹಾಯದಿಂದ ಪುಂಡಾನೆಯನ್ನು ಸೆರೆಹಿಡಿಯಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.