ಬೆಂಗಳೂರು: ಮಾಹಿತಿ ಹಂಚಿಕೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಅವಕಾಶ ಕಲ್ಪಿಸುವುದಕ್ಕಾಗಿ, ‘ಸಹಯೋಗ್ ಪೋರ್ಟಲ್’ ಆರಂಭಿಸಿರುವ ಕೇಂದ್ರದ ಕ್ರಮ ಮತ್ತು ಅದರ ಬಳಕೆಯನ್ನು ಪ್ರಶ್ನಿಸಿ ‘ಎಕ್ಸ್’ ಕಾರ್ಪ್ ಹೈಕೋರ್ಟ್ ಮೆಟ್ಟಿಲೇರಿದೆ.
‘ಮಾಹಿತಿ ಹಂಚಿಕೆಯನ್ನು ನಿರ್ಬಂಧಿಸುವ ದಿಸೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಕಲಂ 79(3)ರ ಅಡಿಯಲ್ಲಿ ಜಾರಿಗೆ ತರಲಾಗಿರುವ ಪೋರ್ಟಲ್ ಕಾನೂನಿನ ವೈರುಧ್ಯಗಳಿಗೆ ಸಾಕ್ಷಿಯಾಗಿದೆ’ ಎಂದು ಆಕ್ಷೇಪಿಸಿ ‘ಎಕ್ಸ್’ನ ಸ್ಥಳೀಯ ಅಧಿಕೃತ ಪ್ರತಿನಿಧಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಪ್ರಕರಣದ ಪ್ರತಿವಾದಿಗಳಾದ, ಕೇಂದ್ರ ಕಾನೂನು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಗೃಹ, ಹಣಕಾಸು, ರಕ್ಷಣಾ ಹಾಗೂ ರೈಲ್ವೆ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.
‘ಮಾಹಿತಿ ತಂತ್ರಜ್ಞಾನ ಕಾಯ್ದೆ 69ಎ ಅಡಿಯಲ್ಲಿ ಮಾತ್ರವೇ ನಿರ್ಬಂಧದ ಆದೇಶ ಹೊರಡಿಸಬಹುದು. ಆದ್ದರಿಂದ, ಮಾಹಿತಿ ಹಂಚಿಕೆ ನಿರ್ಬಂಧಿಸುವ ನಿಟ್ಟಿನಲ್ಲಿ ‘ಎಕ್ಸ್’ ಕಾರ್ಪ್ ಕಂಪನಿಯ ಅಧಿಕಾರಿಗಳು, ನೌಕರರು ಮತ್ತು ಪ್ರತಿನಿಧಿಗಳ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಪ್ರತಿವಾದಿಗಳಿಗೆ ಆದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.