ADVERTISEMENT

ಅಣು ವಿದ್ಯುತ್‌ ಸ್ಥಾವರ: ಸಂಪುಟಕ್ಕೆ ಪ್ರಸ್ತಾವ

ಮೂರು ಸ್ಥಳಗಳಲ್ಲಿ ಭೂ ವೈಜ್ಞಾನಿಕ ಅಧ್ಯಯನಕ್ಕೆ ಎನ್‌ಟಿಪಿಸಿಗೆ ಅನುಮೋದನೆ

ರಾಜೇಶ್ ರೈ ಚಟ್ಲ
Published 11 ಜೂನ್ 2025, 0:32 IST
Last Updated 11 ಜೂನ್ 2025, 0:32 IST
ಕೈಗಾ ಅಣು ವಿದ್ಯುತ್ ಸ್ಥಾವರ (ಸಂಗ್ರಹ ಚಿತ್ರ)
ಕೈಗಾ ಅಣು ವಿದ್ಯುತ್ ಸ್ಥಾವರ (ಸಂಗ್ರಹ ಚಿತ್ರ)   

ಬೆಂಗಳೂರು: ಅಣು ವಿದ್ಯುತ್‌ ಸ್ಥಾವರ ಸ್ಥಾಪಿಸಲು ಗುರುತಿಸಿರುವ ವಿಜಯಪುರ ಜಿಲ್ಲೆಯ ಮಣ್ಣೂರು, ಕೊಪ್ಪಳ ಜಿಲ್ಲೆಯ ಕುಕನಪಲ್ಲಿ, ರಾಯಚೂರು ಜಿಲ್ಲೆಯ ಹಲ್ಕವಟಗಿಗಳಲ್ಲಿ ಪ್ರಾಥಮಿಕ ಅಧ್ಯಯನ ನಡೆಸಿ ಸ್ಥಳಗಳ ಸೂಕ್ಷ್ಮತೆ ತಿಳಿದುಕೊಳ್ಳಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ (ಎನ್‌ಟಿಪಿಸಿ) ಅನುಮತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಎನ್‌ಟಿಪಿಸಿಗೆ ಅನುಮತಿ ನೀಡುವ ಕುರಿತು ಸಚಿವ ಸಂಪುಟದ ಅನುಮೋದನೆ ಪಡೆಯಲು ಇಂಧನ ಇಲಾಖೆಯು ಪ್ರಸ್ತಾವವನ್ನು ಸಿದ್ಧಪಡಿಸಿದೆ. ಈ ಪ್ರಸ್ತಾವದ ಕರಡು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಮಣ್ಣೂರು, ಕುಕನಪಲ್ಲಿ ಮತ್ತು ಹಲ್ಕವಟಗಿ ಈ ಮೂರು ಪ್ರದೇಶಗಳಲ್ಲಿ ಪ್ರಾಥಮಿಕ ಭೂ ವೈಜ್ಞಾನಿಕ ಅಧ್ಯಯನ ನಡೆಸಲು ಅನುಮತಿ ನೀಡುವಂತೆ 2024ರ ಏಪ್ರಿಲ್‌ 10ರಂದು ರಾಜ್ಯ ಸರ್ಕಾರಕ್ಕೆ ಎನ್‌ಟಿಪಿಸಿ ಪ್ರಸ್ತಾವ ಸಲ್ಲಿಸಿತ್ತು. ಅಲ್ಲದೆ, ಎನ್‌ಟಿಪಿಸಿಗೆ ಸ್ಥಳವನ್ನು ಹಂಚಿಕೆ ಮಾಡುವಂತೆ ಕೇಂದ್ರ ವಿದ್ಯುತ್‌ ಸಚಿವರು 2024ರ ನ.4ರಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ADVERTISEMENT

ಮುಖ್ಯ ಕಾರ್ಯದರ್ಶಿ 2024ರ ಜೂನ್‌ 10ರಂದು ನೀಡಿದ್ದ ನಿರ್ದೇಶನದಂತೆ ಇಂಧನ ಇಲಾಖೆಯು, ಪ್ರಸ್ತಾವಿತ ಭೂಮಿ ಲಭ್ಯ ಇದೆಯೇ ಮತ್ತು ಆ ಭೂಮಿಯಲ್ಲಿ ಇಲ್ಲಿಯವರೆಗೆ ಬೇರೆ ಯಾವುದೇ ನಿರ್ಮಾಣಗಳು ಇಲ್ಲವೇ ಎಂಬ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯುವಂತೆ ಕಂದಾಯ ಇಲಾಖೆಗೆ ಜೂನ್‌ 14ರಂದು ಪತ್ರ ಬರೆದಿತ್ತು.

‘ಎನ್‌ಟಿಪಿಸಿ ಸಂಸ್ಥೆಯು ಮಣ್ಣೂರಿನಲ್ಲಿ ಗುರುತಿಸಿರುವ 1,200 ಎಕರೆ ಖಾಸಗಿ ಸಾಗುವಳಿ ಭೂಮಿ ಲಭ್ಯವಿದ್ದು, ಅಲ್ಲಿ ಯಾವುದೇ ಯೋಜನೆಗಳು, ನಿರ್ಮಾಣ ಚಟುವಟಿಕೆ ಇಲ್ಲ’ ಎಂದು ವಿಜಯಪುರ ಜಿಲ್ಲಾಧಿಕಾರಿ 2024ರ ನ. 7ರಂದೇ ವರದಿ ನೀಡಿದ್ದಾರೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳು ಇನ್ನಷ್ಟೇ ವರದಿ ನೀಡಬೇಕಿದೆ.

ಅಣು ವಿದ್ಯುತ್‌ ಸ್ಥಾವರ ಸ್ಥಾಪಿಸಲು ಗುರುತಿಸಿರುವ ಸ್ಥಳಗಳಲ್ಲಿ ಎನ್‌ಟಿಪಿಸಿ ಸಂಸ್ಥೆಗೆ ಪ್ರಾಥಮಿಕ ಅಧ್ಯಯನ ನಡೆಸಲು ಅನುಮತಿ ನೀಡಲು ಮತ್ತು ಕಂದಾಯ, ಕೈಗಾರಿಕೆ ಮತ್ತು ವಾಣಿಜ್ಯ ಹಾಗೂ ಜಲಸಂಪನ್ಮೂಲ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲು ಈ ಇಲಾಖೆಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಮತ್ತು ಕಂದಾಯ ಸಚಿವ‌ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ 2025ರ ಜ. 8ರಂದು ನಡೆದ ಸಭೆಯಲ್ಲಿ, ಎನ್‌ಟಿಪಿಸಿ ಸಂಸ್ಥೆಯಿಂದ ಹೊಸ ಅಣು ವಿದ್ಯುತ್‌ ಸ್ಥಾವರ ಸ್ಥಾಪಿಸುವ ಬಗ್ಗೆ, ಅದರ ಸಾಮರ್ಥ್ಯ, ಭೂ ಹಂಚಿಕೆ, ಸ್ಥಳಗಳನ್ನು ನಿರ್ಧರಿಸುವ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಲಾಗಿತ್ತು. 

ಉದ್ದೇಶಿತ ಯೋಜನೆಯನ್ನು ಎನ್‌ಟಿಪಿಸಿ ತನ್ನ ಸ್ವಂತ ಸಂಪನ್ಮೂಲದಿಂದ ಅಭಿವೃದ್ಧಿಪಡಿಸಲಿದ್ದು, ರಾಜ್ಯ ಸರ್ಕಾರಕ್ಕೆ ಯಾವುದೇ ಹಣಕಾಸಿನ ಹೊಣೆಗಾರಿಕೆ ಇರುವುದಿಲ್ಲ. ಕೇಂದ್ರ ವಿದ್ಯುತ್‌ ಸಚಿವಾಲಯದ ಮಾರ್ಗಸೂಚಿ ಪ್ರಕಾರ, ಸ್ಥಾಪಿತ ಸಾಮರ್ಥ್ಯದ ಶೇ 50ರಷ್ಟು ವಿದ್ಯುತ್‌ ಅನ್ನು ತವರು ರಾಜ್ಯ ಕೋಟಾದಡಿ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗುತ್ತದೆ. ವಿದ್ಯುತ್‌ ಪಡೆಯಲು ರಾಜ್ಯ ವಿದ್ಯುತ್‌ ಸರಬರಾಜು ಕಂಪನಿಗಳು ಎನ್‌ಟಿಪಿಸಿ ಸಂಸ್ಥೆಯ ಜೊತೆಗೆ ವಿದ್ಯುತ್‌ ಖರೀದಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಚಿವ ಸಂಪುಟ ಸಭೆಗೆ ಸಿದ್ಧಪಡಿಸಿರುವ ಪ್ರಸ್ತಾವದಲ್ಲಿ ವಿವರಿಸಲಾಗಿದೆ.

ಎನ್‌ಟಿಪಿಸಿಗೆ ಅನುಮತಿ ನೀಡುವ ವಿಷಯ ಜೂನ್ 5ರಂದು ನಡೆದ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಇತ್ತು. ಆದರೆ, ಆ ಸಭೆಗೆ ಇಂಧನ ಸಚಿವರು ಗೈರಾದ ಕಾರಣ ವಿಷಯ ಮುಂದೂಡಿಕೆ ಆಗಿತ್ತು.

ಪ್ರಸ್ತಾಪಿತ ಯೋಜನೆಯ ವಿವರ

l ಉದ್ದೇಶಿತ ಯೋಜನೆಗೆ 2 ಸಾವಿರ ಮೆಗಾ ವಾಟ್‌ಗೆ 1,200 ಎಕರೆ,
4 ಸಾವಿರ ಮೆಗಾ ವಾಟ್‌ಗೆ 1,600 ಎಕರೆ, 6 ಸಾವಿರ ಮೆಗಾ ವಾಟ್‌ಗೆ 2,000 ಎಕರೆ ಭೂಮಿ ಅಗತ್ಯವಿದೆ. ಕಾಲೊನಿ ಸ್ಥಾಪಿಸಲು ಹೆಚ್ಚುವರಿಯಾಗಿ 100 ರಿಂದ 150 ಎಕರೆ ಅವಶ್ಯವಿದೆ

l ಸ್ಥಾವರದ ಸಾಮರ್ಥ್ಯಕ್ಕೆ ತಕ್ಕಂತೆ ವಾರ್ಷಿಕ 2ರಿಂದ 6 ಟಿಎಂಸಿ ಅಡಿ ನೀರು ಅಗತ್ಯವಿದೆ

l ಯೋಜನೆಯ ಜಕಾತಿ (ವಿದ್ಯುತ್) ದರವು ಪ್ರತಿ ಯೂನಿಟ್‌ಗೆ ₹ 6.50 ರಿಂದ ₹ 7.50ರವರೆಗೆ ಇರಲಿದೆ. ಯೋಜನೆಯ ಜೀವಿತಾವಧಿ ಅಂದರೆ 40 ರಿಂದ 60 ವರ್ಷಗಳವರೆಗೆ ವಿದ್ಯುತ್‌ ದರ ಬಹುಪಾಲು ಸ್ಥಿರವಾಗಿ ಇರಲಿದೆ

l ಸ್ಥಳ ಆಯ್ಕೆ ಮಾನದಂಡವು ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಪ್ರಕಾರ ಇರಲಿದೆ. ಅಂದರೆ, ಸ್ಥಳವು ಭೂಕಂಪನ ವಲಯ ಐದರಲ್ಲಿ ಇರಬಾರದು. 5 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿಯಲ್ಲಿ ಯಾವುದೇ ಸಕ್ರಿಯ ದೋಷ ಇರಬಾರದು. 16 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ, ವಿಮಾನ ನಿಲ್ದಾಣ, ರಾಸಾಯನಿಕ ಕೈಗಾರಿಕೆಗಳು ಇತ್ಯಾದಿಗಳ ಅನುಪಸ್ಥಿತಿ ಆಧಾರದಲ್ಲಿ ‘ಸ್ಕ್ರೀನಿಂಗ್‌ ಡಿಸ್ಟೆನ್ಸ್ ವ್ಯಾಲ್ಯೂ’ ನಿರ್ಧರಿಸಲಾಗುವುದು. 5 ಕಿ.ಮೀ ಒಳಗೆ ಜನಸಂಖ್ಯೆ ವಿರಳ ಇರಬೇಕು. ಪ್ರವಾಹ, ಸುನಾಮಿ ಇತ್ಯಾದಿಗಳ ಅಪಾಯ ಕಡಿಮೆ ಇರಬೇಕು

l ಯೋಜನೆಯ ಅನುಷ್ಠಾನ ಅವಧಿ 10ರಿಂದ 13 ವರ್ಷ

ಇಂಧನ ಇಲಾಖೆಯ ಸಮರ್ಥನೆಗಳೇನು?

l ಉಷ್ಣ ವಿದ್ಯುತ್‌ ತಂತ್ರಜ್ಞಾನ ಪೂರೈಕೆದಾರರ ಸಂಖ್ಯೆ ವಿಶ್ವದಾದ್ಯಂತ ಕ್ಷೀಣಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪರಮಾಣು ವಿದ್ಯುತ್‌ ಇಂಧನ ಮೂಲಗಳಿಂದ ಗುಣಮಟ್ಟದ, ನಿರಂತರ ವಿದ್ಯುತ್ತಿನ ಅಗತ್ಯವನ್ನು ಪೂರೈಸಬೇಕಾಗಿದೆ

l ಪರಮಾಣು ವಿದ್ಯುತ್ ಅನ್ನು ಕೇಂದ್ರ ಸರ್ಕಾರ ಸ್ವಚ್ಛ ಇಂಧನವೆಂದು
ಉತ್ತೇಜಿಸುತ್ತಿದೆ 

l ರಾಜ್ಯದ ‘ಸಂಪನ್ಮೂಲ ಸಮರ್ಪಕತೆ’ ಅಧ್ಯಯನ ವರದಿಯ ಪ್ರಕಾರ 2022–34ರ ವೇಳೆಗೆ ರಾಜ್ಯವು 38,263 ಮೆಗಾವಾಟ್‌ನಷ್ಟು ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಸೇರ್ಪಡೆ ಗೊಳಿಸಬೇಕಿದೆ. ರಾಜ್ಯದ ವಿದ್ಯುತ್ ಬೇಡಿಕೆಯು ಪ್ರತಿವರ್ಷ ಶೇ 6 ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

l ಕರ್ನಾಟಕವು ಅಣು ವಿದ್ಯುತ್‌ ಸ್ಥಾವರ ಸ್ಥಾಪಿಸಿದರೆ ತವರು ರಾಜ್ಯ ಕೋಟಾದಡಿ ಸ್ಥಾವರದ ಸ್ಥಾಪಿತ ಸಾಮರ್ಥ್ಯದ ಶೇ 50 ರಷ್ಟು ವಿದ್ಯುತ್‌ ಅನ್ನು ರಾಜ್ಯವು ಪಡೆಯಬಹುದು

l ಉದ್ದೇಶಿತ ಯೋಜನೆಯಿಂದ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ, ಉದ್ಯೋಗಾವಕಾಶ ಸೃಷ್ಟಿ, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಚಟುವಟಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಾಗಿ ಸುತ್ತಲಿನ ಗ್ರಾಮಗಳ ಉನ್ನತಿ ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.